ಸೋಮವಾರಪೇಟೆ: ಶ್ರೀ ಬಸವೇಶ್ವರ ದೇವಾಲಯದ ವಿಮಾನಗೋಪುರ ಕಳಸ ಪ್ರತಿಷ್ಠಾಪನಾ ಪಂಚ ದಶಮಾನೋತ್ಸವ ಪೂಜಾ ಕಾರ್ಯಕ್ರಮ ಜ.23 ಮತ್ತು 24ರಂದು ನಡೆಯಲಿದೆ ಎಂದು ದೇವಾಲಯದ ಯಜಮಾನರಾದ ಬಿ.ಪಿ. ಶಿವಕುಮಾರ್‌ತಿಳಿಸಿದ್ದಾರೆ.
ಸ್ಥಳೀಯ ವಿರಕ್ತ ಮಠದ ನಿಶ್ಚಲ ನಿರಂಜನ ದೇಶಿಕೇಂದ್ರ ಮಹಾಸ್ವಾಮಿಗಳು, ಬಸವಾಪಟ್ಟಣದ ತೊಂಟದಾರ್ಯ ಸಂಸ್ಥಾನ ಮಠದ ಬಸವಲಿಂಗ ಶಿವಯೋಗಿಗಳು, ಶನಿವಾರಸಂತೆ ಸಿಡಿಗಳಲೆ ಮಠದ ಇಮ್ಮಡಿ ಶಿವಲಿಂಗ ಮಹಾಸ್ವಾಮಿಗಳು ಹಾಗು ಮನೆಹಳ್ಳಿ ಮಠದ ಮಹಾಂತ ಶಿವಲಿಂಗ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
23ರ ಬೆಳಗ್ಗೆ 7.30ಕ್ಕೆ ಗಂಗಾ ಪೂಜೆ, ಮಹಾಗಣಪತಿ ಪೂಜೆ, ವಾಸ್ತು ಪೂಜೆ ನಡೆಯಲಿದೆ. ಸಂಜೆ 4 ಗಂಟೆಗೆ ಶ್ರೀ ಮಹಾಗಣಪತಿ ಹೋಮ, ವಾಸ್ತು ಹೋಮ, ಅಘೋರ ಹೋಮ, ಆದಿತ್ಯಾದಿ ನವಗ್ರಹ ಮಹಾಮೃತ್ಯುಂಜಯ ಹೋಮ, ಕಾಳ ಹೋಮ, ಅವಾಹಿತ ಕಲಶಾಧಿ ದೇವತೆಗಳ ಹೋಮ ಪೂಜೆ ನಂತರ ಪೂರ್ಣ ಫಲ ಸಮರ್ಪಣೆ ನಡೆಯಲಿದೆ.
24 ರಂದು ಬೆಳಗ್ಗೆ 5 ಗಂಟೆಗೆ ಶುಭ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಬಸವೇಶ್ವರ ಸ್ವಾಮಿಗೆ ಲಘುನ್ಯಾಸ ಪೂರ್ವಕ, 7 ಗಂಟೆಗೆ ರುದ್ರಹೋಮ, ಜಯಾದಿ ಹೋಮ ನಂತರ ಮಹಾ ಪೂರ್ಣಾಹುತಿ, ರಾಜೋಪಚಾರ ಸಹಿತ ಮಂಗಳಾರತಿ ನಡೆಯಲಿದೆ.
ಈ ಎಲ್ಲ ಪೂಜಾ ಕಾರ್ಯಕ್ರಮಗಳು ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ವಿದ್ವಾನ್ ಬಿ.ಬಿ.ರುದ್ರಪ್ಪ ಶಾಸ್ತ್ರಿಗಳು ಮತ್ತು ತಂಡದವರು ನಡೆಸಿಕೊಡಲಿದ್ದಾರೆ.