

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ನಗರದ ನೆಲದಾಂಜನೇಯ ಸ್ವಾಮಿ ದೇವಾಲಯದಲ್ಲಿ ಸೇವಾ ಟ್ರಸ್ಟ್ ವತಿಯಿಂದ ನೂತನವಾಗಿ ಪ್ರತಿಷ್ಠಾಪಿಸಿರುವ 15 ಅಡಿ ಎತ್ತರದ ಕಲ್ಲಿನ ಗದೆಯ ಪ್ರತಿಷ್ಠಾಪನೆ ನೆರವೇರಿತು.
ಗಣಪತಿ, ಗಂಗಪೂಜೆ, ಕಲಶ ಸ್ಥಾಪನೆ, ಪ್ರಧಾನ ಹೋಮ, ಪಂಚಾಮೃತ ಅಭಿಷೇಕ, ಕುಂಭಾಭಿಷೇಕ, ಅಷ್ಟಾವಧಾನ ಸೇವೆ, ವಿವಿಧ ಹೋಮ, ಸಂಜೆ ಗೋ ಪೂಜೆ, ಮಂಗಳಾರತಿ ನಡೆಸಲಾಯಿತು.
ವಿಶಿಷ್ಟ ಗದೆ: ಜಿಲ್ಲೆಯಲ್ಲಿಯೇ ಪ್ರಥಮವಾಗಿ ನಿರ್ಮಾಣವಾಗಿ ವಿಶಿಷ್ಟವಾದ ಗದೆ ಎನ್ನಲಾಗಿದ್ದು, ಕೊಯಿರಾ ಕಲ್ಲನ್ನು ಬಳಸಿ ನಿರ್ಮಿಸಿರುವ 15 ಅಡಿ ಎತ್ತರದ ಈ ಗದೆಗೆ 2.5 ಲಕ್ಷ ರೂ., ವೆಚ್ಚಮಾಡಲಾಗಿದೆ. ಗದೆ ಸುತ್ತ 2 ಲಕ್ಷರೂ., ವೆಚ್ಚದಲ್ಲಿ ಗ್ರಿಲ್ ಹಾಗೂ ಉದ್ಯಾನವನ ನಿರ್ಮಿಸಲಾಗಿದೆ. ಗದೆ ಸುಂದರ ಕೆತ್ತನೆಯಿಂದ ಕೂಡಿದ್ದು, ಗೋಳದಲ್ಲಿ ಶ್ರೀರಾಮ್ ಎಂದು ಕೆತ್ತಲಾಗಿದೆ. ತಮಿಳುನಾಡಿನ ಮೈಲಾತೊರೆ ಶಿಲ್ಪಿ ಪರಿಯಾಸ್ವಾಮಿ ತಂಡ ಈ ಗದೆಯನ್ನು 3 ತಿಂಗಳ ಕಾಲ ಕೆತ್ತಿ, ಪೂರ್ಣಗೊಳಿಸಿದ್ದಾರೆ. ಗದೆಯನ್ನು 8 ಅಡಿ ಆಳದ ಕಲ್ಲಿನ ತಳಪಾಯದ ಮೇಲೆ ನಿಲ್ಲಿಸಲಾಗಿದ್ದು, ಪ್ರಾಕೃತಿಕ ವಿಪತ್ತು ತಡೆಯುವ ಶಕ್ತಿಯಿದೆ.
ತಮಿಳುನಾಡಿನ ತಂಡ ತಯಾರಿ: ಪುತ್ತೂರು ತಾಲೂಕಿನ ಈಶ್ವರ ಮಂಗಳದ ಹನುಮಗಿರಿಯ ಪಂಚಮುಖಿ ಆಂಜನೇಯ ದೇವಾಲಯದಲ್ಲಿ ಇದ್ದ, ಕಲ್ಲಿನ ಗದೆಯನ್ನು ನೋಡಿಕೊಂಡು ಬಂದ ದೇವಾಲಯದ ಸಮಿತಿ ನಮ್ಮ ಊರಿನ ನೆಲದಾಂಜನೇಯಸ್ವಾಮಿ ದೇವಾಲಯ ದಲ್ಲಿಯೂನಿರ್ಮಿಸಬೇಕೆಂದು ನಿಶ್ಚಯಿಸಲಾಗಿತ್ತು. ದೇವಾಲಯಕ್ಕೆ ಹಾಗೂ ತಾಲೂಕಿಗೆ ಪ್ರಮುಖ ಆಕರ್ಷಣೆಯಾಗಿ ರೂಪುಗೊಂಡಿದೆ ಎಂದು ನೆಲದಾಂಜನೇಯಸ್ವಾಮಿ ಸೇವಾ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶೀ ಬಿ.ಎಲ್. ಸೀತಾರಾಂ ತಿಳಿಸಿದರು.