ಶ್ರದ್ಧಾಭಕ್ತಿಯಿಂದ ಜರುಗಿದ ಶಿಲಾ ಮೂರ್ತಿಗಳ ಪ್ರತಿಷ್ಠಾಪನೆ

ಶ್ರದ್ಧಾಭಕ್ತಿಯಿಂದ ಜರುಗಿದ ಶಿಲಾ ಮೂರ್ತಿಗಳ ಪ್ರತಿಷ್ಠಾಪನೆ
Published on

ಶ್ರವಣಬೆಳಗೊಳ: ಹೋಬಳಿಯ ಕಬ್ಬಾಳು ಗ್ರಾಮದಲ್ಲಿ ನಿರ್ಮಿಸಿರುವ ರಾಮ ಮಂದಿರ, ಗ್ರಾಮ ದೇವತೆ ಕನ್ನಂಬಾಡಮ್ಮ ದೇವಿಯ ದೇವಾಲಯ, ಸಂಗೊಳ್ಳಿ ರಾಯಣ್ಣ ಪ್ರತಿಮೆ, ಬಯಲು ರಂಗಮಂದಿರದ ಲೋಕಾರ್ಪಣೆ ಶಿಲಾ ಮೂರ್ತಿಗಳ ಪ್ರತಿಷ್ಠಾಪನೆಯು ಶ್ರದ್ಧಾ ಭಕ್ತಿಯಿಂದ ಭಾನುವಾರ ನೆರವೇರಿತು.

ಬೆಳಗ್ಗೆ ರಾಮ ಮಂದಿರದಲ್ಲಿ ರಾಮ, ಸೀತಾದೇವಿ, ಲಕ್ಷ್ಮಣ ಹಾಗೂ ಆಂಜನೇಯ ಸ್ವಾಮಿಯ ಶಿಲಾ ಮೂರ್ತಿಗಳನ್ನು ಮಂತ್ರ ಘೋಷಗಳೊಂದಿಗೆ ಪ್ರತಿಷ್ಠಾಪಿಸಿ ಕುಂಭಾಭಿಷೇಕ ನಡೆಸಲಾಯಿತು. ಅಭಿಷೇಕಕ್ಕೂ ಮೊದಲು ದೇವರ ಸನ್ನಿಧಿಯಲ್ಲಿ ಹೋಮ ಹವನ ನೆರವೇರಿಸಿ ಅಗ್ನಿಗಾಹುತಿಯನ್ನು ನೀಡಿ ನಂತರ ಪ್ರತಿಷ್ಠಾಪಿಸಿದ್ದ ಮಂಗಲ ಕಳಸಗಳನ್ನು ಹೊತ್ತ ಪುರುಷ, ಮಹಿಳೆಯರು ಮಂಗಳ ವಾಧ್ಯದೊಂದಿಗೆ ಮಂದಿರದ ಪ್ರದಕ್ಷಿಣೆ ಹಾಕಿ ಕಳಸಾರೋಹಣವನ್ನು ನೆರವೇರಿಸಲಾಯಿತು.

ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಬೆಂಗಳೂರು ತಾವರೆಕೆರೆ ಹಟಯೋಗಿ ಕಾಳಪ್ಪ ಸ್ವಾಮಿ ಮಠದ ರೇವಣ ಸಿದ್ದೇಶ್ವರ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ನಡೆದವು. ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಚಾಲನೆ ನೀಡಿದರು.

ಪಿ.ಎನ್.ರವೀಂದ್ರ ಮಾತನಾಡಿ, ಗ್ರಾಮದಲ್ಲಿ ರಾಮ ಮಂದಿರ ನಿರ್ಮಿಸಿ ಶ್ರೀರಾಮ, ಸೀತೆಯ ಆದರ್ಶ ಗುಣಗಳನ್ನು ಮುಂದಿನ ಪೀಳಿಗೆಯವರಿಗೆ ಪ್ರೇರಣೆಯಾಗುವಂತೆ ಮಾಡಿರುವುದು ಅತ್ಯಂತ ಹೆಮ್ಮೆಯ ಸಂಗತಿ ಎಂದರು.

ಅಪ್ರತಿಮ ಸ್ವಾತಂತ್ರೃ ಹೋರಾಟಗಾರ ಸಂಗೊಳ್ಳಿ ರಾಯಣ್ಣರ ಪ್ರತಿಮೆಯನ್ನು ಪ್ರತಿಷ್ಠಾಪಿಸಿದ ಯುವಕರ ಕಾಳಜಿ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ರೇವಣ ಸಿದ್ದೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ, ಇಡೀ ಗ್ರಾಮದಲ್ಲಿ ಎಲ್ಲರೂ ಒಗ್ಗೂಡಿ ಅನೇಕ ಪುಣ್ಯ ಕಾರ್ಯಗಳನ್ನು ಸಾಧಿಸಿ ಇಲ್ಲಿನ ಯುವಕರಿಗೆ ಯಜಮಾನರುಗಳು ಸ್ಪೂರ್ತಿಯಾಗಿದ್ದಾರೆ ಎಂದರು.

ಆಧುನಿಕತೆಯ ಯುಗದಲ್ಲಿ ಪ್ರತಿಯೊಬ್ಬರಿಗೂ ಶಾಂತಿ ನೆಮ್ಮದಿ ಬೇಕಾಗುತ್ತದೆ. ಅಂತಹ ಶಾಂತಿಯ ವಾತಾವರಣ ನಿರ್ಮಾಣವಾಗುವಂತೆ ಮೇರು ವ್ಯಕ್ತಿತ್ವದ ಪುರುಷರ ಶ್ರದ್ಧಾ ತಾಣಗಳನ್ನು ಮಾಡಿರುವುದು ವಿಶೇಷವಾಗಿದೆ ಎಂದರು.

ಕಾರ್ಯಕ್ರಮಕ್ಕೂ ಮೊದಲು ರಾಮ ಮಂದಿರದಿಂದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಇರುವ ವೇದಿಕೆವರೆಗೆ ಗಣ್ಯರು, ಅತಿಥಿಗಳು ಹಾಗೂ ಶ್ರೀಗಳನ್ನು ಡೊಳ್ಳು ಕುಣಿತ ಮೆರವಣಿಗೆಯ ಮೂಲಕ ಕರೆ ತರಲಾಯಿತು.

ಪುಟಾಣಿ ಯುಕ್ತಾರಿಂದ ನೃತ್ಯ, ದೇವರಾಜು ತಂಡದಿಂದ ಸುಗಮ ಸಂಗೀತ, ಕೆಂಪಣ್ಣ ದಾಸರು ಮತ್ತು ತಂಡದವರಿಂದ ಹರಿಕಥೆ ನಡೆಯಿತು.
ಪೂಜೆಯ ನೇತೃತ್ವವನ್ನು ವಿನಯ್ ಮತ್ತು ತಂಡದವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೆ.ಎನ್.ಸುಕುಮಾರ್, ಸದಸ್ಯೆ ಪೂರ್ಣಿಮಾ ನಂದೀಶ್, ಮಾಜಿ ಜಿ.ಪಂ.ಸದಸ್ಯೆ ಮಮತಾ ರಮೇಶ್, ತಾಲೂಕು ಕುರುವರ ಸಂಘದ ಅಧ್ಯಕ್ಷ ಕೆ.ಆರ್.ರಮೇಶ್, ಸಂಗೊಳ್ಳಿ ರಾಯಣ್ಣ ಸಾಂಸ್ಕೃತಿಕ ಯುವ ಘರ್ಜನೆ ಅಧ್ಯಕ್ಷ ಚಂದ್ರಶೇಖರ್ ಹೆಗ್ಗಡಿ ಡಿ.ಕೆ. ಗೌ.ಅ.ಬಸವರಾಜ್, ಕಾರ್ಯದರ್ಶಿ ದುರ್ಗೇಶ್, ಖಜಾಂಚಿ ಶಿವಕುಮಾರ್, ಸಹಕಾರ್ಯದರ್ಶಿ ಮನೋಜ್, ಪುನೀತ್ ಶೆಟ್ಟಿ, ಬಾಲರಾಜ್ ಮತ್ತು ಸದಸ್ಯರು ಬಯಲು ರಂಗ ಮಂದಿರ ದಾನಿ ನಿವೃತ್ತ ಕಂದಾಯ ಅಧಿಕಾರಿ ಕೆ.ಬಿ.ರಾಮಕೃಷ್ಣ ನಾಗರತ್ನಾ, ಕಬ್ಬಾಳು ಯತೀಶ್, ಎಸ್‌ಡಿಎಂಸಿ ಅಧ್ಯಕ್ಷ ಮಂಜೇಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net