

ಶಿವಮೊಗ್ಗ:ಪ್ರತಿ ವರ್ಷದಂತೆ ಈ ವರ್ಷವೂ ರವೀಂದ್ರ ನಗರ ಗಣಪತಿ ದೇವಾಲಯದಲ್ಲಿ ಶರನ್ನವರಾತ್ರಿ ಉತ್ಸವ ಏರ್ಪಡಿಸಲಾಗಿದ್ದು, ಈ ಬಾರಿ ಸರಸ್ವತಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಿರುವುದು ವಿಶೇಷವಾಗಿದೆ. ಅ.3ರ ಬೆಳಗ್ಗೆ ಈ ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ದಸರಾ ಆರಂಭವಾಗಿದೆ. ಪ್ರತಿ ದಿನ ಚಂಡಿಕಾ ಯಾಗ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಪೂರ್ಣಾಹುತಿ ಬಳಿಕ ತೀರ್ಥ, ಪ್ರಸಾದ ವಿನಿಯೋಗವಿರುತ್ತದೆ.
ಅ. 3 ರಿಂದ 18 ರವರೆಗೆ ಪ್ರತಿದಿನ ಸಂಜೆ 6.30ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕ್ರಮವಾಗಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ದಿವ್ಯ ಸತ್ಸಂಗ, ಗರ್ತಿಕೆರೆ ರಾಘಣ್ಣ ಅವರಿಂದ ಸುಗಮ ಸಂಗೀತ, ಮನುಕಲಾ ಕೇಂದ್ರದಿಂದ ಭರತನಾಟ್ಯ, ಮೋಹನ್ ಕುಮಾರ್ ಅವರಿಂದ ದುರ್ಗಾ ವೈಭವ ಹರಿಕತೆ, ಸಿ.ಎನ್.ಮಾಧವ ಭಟ್ ಚನ್ನಿಗ ಅವರಿಂದ ಕರ್ನಾಟಕ ಶಾಸ್ತ್ರೀಐ ಸಂಗೀತ, ಎಸ್.ಶಿವಕುಮಾರ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಸಹಚೇತನಾ ನಾಟ್ಯಾಲಯದಿಂದ ಭರತ ನಾಟ್ಯ ಮುಂತಾದ ಕಾರ್ಯಕ್ರಮಗಳಿವೆ.
ಅ.17ರ ಮಧ್ಯಾಹ್ನ 12.30ಕ್ಕೆ ಶತಚಂಡಿಕಾ ಯಾಗದ ಪೂರ್ಣಾಹುತಿ ನೆರವೇರಲಿದೆ. ಅಂದು ಸಂಜೆ 7ಕ್ಕೆ ಸಾಮೂಹಿಕ ಸತ್ಯನಾರಾಯಣ ಪೂಜೆ ಶಾರದಾ ಸಂಗೀತ ನೃತ್ಯ ವಿದ್ಯಾಲಯದ ಅರುಣ್‌ಕುಮಾರ್ ತಂಡದವರಿಂದ ಭಜನಾ ವೈಭವವಿದೆ. 18ರಂದು ಸಾಮೂಹಿಕ ಲಲಿತಾ ಸಹಸ್ರನಾಮ ಪುಷ್ಪಾರ್ಚನೆ, ಕಲ್ಪೋಕ್ತ ಪೂಜೆ ಜರುಗಲಿದ್ದು, ಸಂಜೆ 4.30ಕ್ಕೆ ಸರಸ್ವತಿ ದೇವಿಯ ರಾಜಬೀದಿ ಉತ್ಸವ ನಡೆಯಲಿದೆ.