

ಅರಕಲಗೂಡು: ಅನ್ನದಾತರ ಬೆಳೆ ರಕ್ಷಿಸಿ ಕಾಡಾನೆಗಳ ಹಾವಳಿ ನಿಯಂತ್ರಿಸುವ ಉದ್ದೇಶದಿಂದ ತಾಲೂಕಿನಲ್ಲಿ ರೈಲು ಹಳಿ ಬ್ಯಾರಿಕೇಡ್ ಅಳವಡಿಕೆಗೆ 18 ಕೋಟಿ ರೂ. ಅನುದಾನ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದೆ ಎಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ದಿವಾಕರಗೌಡ ತಿಳಿಸಿದರು.
ತಾಲೂಕಿನ ರಾಮನಾಥಪುರದಲ್ಲಿ ಮಂಗಳವಾರ ವಿವಿಧ ರೈತ ಸಂಘಟನೆಗಳು ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಕಾಡಾನೆಗಳ ಉಪಟಳದಿಂದ ರೈತರು ಬೆಳೆದ ಬೆಳೆಗಳನ್ನು ಕೈಗೆ ತೆಗೆದುಕೊಳ್ಳದಂತಾಗಿದೆ. ಕಳೆದ ವಾರ ನೆಲಬಳ್ಳಿಯಲ್ಲಿ ವಿದ್ಯುತ್ ತಗುಲಿ ಕಾಡಾನೆ ಮೃತಪಟ್ಟಿದೆ. ಅವುಗಳಿಗೂ ಬದುಕುವ ಹಕ್ಕಿದೆ. ಆದರೆ ರೈತರ ಬೆಳೆಗಳನ್ನು ಉಳಿಸಿಕೊಳ್ಳಲು ಕಾಡಾನೆಗಳಿಗೆ ಕಡಿವಾಣ ಹಾಕಬೇಕಿದೆ. ಈ ನಿಟ್ಟಿನಲ್ಲಿ ರೈಲು ಹಳಿ ಬ್ಯಾರಿಕೇಡ್ ನಿರ್ಮಾಣ ಮಾಡಲು ದೊಡ್ಡ ಮೊತ್ತದ ಅನುದಾನ ಒದಗಿಸುವಂತೆ ಮನವಿ ಮಾಡಲಾಗಿದ್ದು, ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ರೈತರು ನೀರಾವರಿ ಸೌಲಭ್ಯದಿಂದ ವಂಚಿತರಾಗದಂತೆ ಹಳ್ಳಿಮೈಸೂರು ಹೋಬಳಿ ರಂಗೇನಹಳ್ಳಿ ಹಾಗೂ ಮಲ್ಲಿಪಟ್ಟಣ ಏತ ನೀರಾವರಿ ಯೋಜನೆ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಸಿದ್ದರಾಮಯ್ಯ ಅವರ ಬಳಿ ರೈತರ ನಿಯೋಗ ಕೊಂಡೊಯ್ದು ಮನವಿ ಮಾಡಿದೆ. ರೈತರ ಮನವಿಗೆ ಸ್ಪಂದಿಸಿ ಸಿದ್ದರಾಮಯ್ಯ ಅವರ 70 ಕೋಟಿ ರೂ. ಅನುದಾನ ಮಂಜೂರಾತಿ ನೀಡಿದ್ದು, ಈಗ ಕಾಮಗಾರಿಗೆ ಕೈಗೆತ್ತಿಕೊಳ್ಳಲಾಗಿದೆ. ಶಂಭುನಾಥಪುರದಲ್ಲಿ ಸ್ಮಶಾನ ಜಾಗಕ್ಕೆ 70 ಲಕ್ಷ ರೂ. ಅನುದಾನ ಕೊಡಿಸಿದೆ. ಹಳ್ಳಿಮೈಸೂರು ಹೋಬಳಿಯಲ್ಲಿ ರಸ್ತೆ ದುರಸ್ತಿಗೆ 7.50 ಕೋಟಿ ರೂ. ಮಂಜೂರು ಮಾಡಿಸಲಾಗಿದೆ. ಕಾಲನಿಗಳ ರಸ್ತೆ ಅಭಿವೃದ್ಧಿಗೆ 5 ಕೋಟಿ ರೂ., ರಾಮನಾಥಪುರದಲ್ಲಿ ರಸ್ತೆ ಅಭಿವೃದ್ಧಿಗೆ ಒಂದು ಕೋಟಿ ರೂ. ಹಾಗೂ ಕೊಣನೂರು ಸರ್ಕಾರಿ ಆಸ್ಪತ್ರೆಗೆ 1 ಕೋಟಿ ರೂ. ಅನುದಾನಕ್ಕೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ರೈತ ಮುಖಂಡ ಮಣಿ ಮಲ್ಲೇಶ್ ಮಾತನಾಡಿ, ಇಲ್ಲಿ ರಾಗಿ ಖರೀದಿ ಕೇಂದ್ರ ಆರಂಭವಾಗುವ ಮುಂಚೆ ದಲ್ಲಾಳಿಗಳು ಹಳ್ಳಿಗಳಲ್ಲಿ ರೈತರ ಮನೆ ಬಾಗಿಲಿಗೆ ತೆರಳಿ ಬೇಕಾಬಿಟ್ಟಿ ದರದಲ್ಲಿ ರಾಗಿ ಕೊಂಡು ವಂಚಿಸುತ್ತಿದ್ದರು. ಈಗ ದಲ್ಲಾಳಿಗಳ ದಂಧೆ ತಪ್ಪಿದೆ ಎಂದರು.
ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಡಾ. ರಾಘವೇಂದ್ರಗೌಡ, ಮುಖಂಡರಾದ ಬಿ.ಜೆ. ರಾಮೇಗೌಡ ಮಾತನಾಡಿದರು. ರೈತ ಸಂಘದ ಮುಖಂಡರಾದ ಲೋಕೇಶ್, ಪುಟ್ಟರಾಜು, ಅವಿನಾಶ್, ಕೃಷ್ಣೇಗೌಡ, ಮಂಜು, ನಟರಾಜು, ರಾಜೇಶ್, ಕರೀಗೌಡ, ಗೋವಿಂದರಾಜು, ಯೋಗಣ್ಣ ಇತರರಿದ್ದರು.
ಇದಕ್ಕೂ ಮುನ್ನ ರಾಮನಾಥಪುರ ರಾಗಿ ಖರೀದಿ ಕೇಂದ್ರ ಮುಂಭಾಗ ರೈತ ಸಂಘದ ಮುಖಂಡರು ದಿವಾಕರಗೌಡ ಅವರಿಗೆ ಹೂ ಮಳೆ ಸುರಿಸಿ ಜೆಸಿಬಿ ಮೂಲಕ ಬೃಹತ್ ಗಾತ್ರದ ಹೂವಿನ ಹಾರ ಹಾಕಿ ಸ್ವಾಗತಿಸಿದರು.