ಚನ್ನಮ್ಮ ಮೈದಾನದಲ್ಲಿ ಶ್ರೀಕೃಷ್ಣ ರೂಪಿ ಗಣೇಶ ಮೂರ್ತಿ ಪ್ರತಿಷ್ಠಾಪನೆ

New Krishna Ganesh New
Published on

ಹುಬ್ಬಳ್ಳಿ : ಗಣೇಶೋತ್ಸವ ಅಂಗವಾಗಿ ಇಲ್ಲಿನ ರಾಣಿ ಚನ್ನಮ್ಮ ಮೈದಾನದಲ್ಲಿ ಈ ಬಾರಿ ‘ದೈತ್ಯಾಕಾರದ ಹಾವಿನ ಮೇಲೆ ಕೊಳಲು ನುಡಿಸುತ್ತ ಕುಳಿತ ಶ್ರೀ ಕೃಷ್ಣ’ ರೂಪದ ಗಣಪತಿ ವಿಗ್ರಹ ಪ್ರತಿಷ್ಠಾಪಿಸಲಾಗುತ್ತಿದೆ.

ಮೊದಲ ಎರಡು ವರ್ಷ ಗಣೇಶ ಮೂರ್ತಿಯನ್ನು ಈ ಮೈದಾನದಲ್ಲಿ ಪ್ರತಿಷ್ಠಾಪಿಸಿದ್ದ ರಾಣಿ ಚನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳಿ, ಕಳೆದ ವರ್ಷ ಅಯೋಧ್ಯೆಯ ಶ್ರೀರಾಮನ ರೂಪದ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿತ್ತು.

ಅಂದಾಜು 6.50 ಅಡಿ ಎತ್ತರದ ಶ್ರೀ ಕೃಷ್ಣ ರೂಪದ ಗಣಪತಿ ಮೂರ್ತಿಯನ್ನು ಹುಬ್ಬಳ್ಳಿಯ ಪ್ರಶಾಂತ ಪತ್ತಾರ ಅವರು ತಯಾರಿಸಿದ್ದಾರೆ.

ಗಣೇಶೋತ್ಸವ ಅಂಗವಾಗಿ ರಾಣಿ ಚನ್ನಮ್ಮ ಮೈದಾನದಲ್ಲಿ ಆ. 26ರಂದು ಬೆಳಗ್ಗೆ 9 ಗಂಟೆಗೆ ಗಣೇಶ ಮಂಟಪದ ಹಾಲಗಂಬ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿದೆ.

27ರಂದು ಬೆಳಗ್ಗೆ 8 ಗಂಟೆಗೆ ಮೂರುಸಾವಿರ ಮಠದ ಆವರಣದಿಂದ ಗಣಪತಿ ಮೂರ್ತಿಯನ್ನು ಮೆರವಣಿಗೆ ಮೂಲಕ ಚನ್ನಮ್ಮ ಮೈದಾನಕ್ಕೆ ತಂದು, ನಿಗದಿತ ಜಾಗದಲ್ಲಿ ಪ್ರತಿಷ್ಠಾಪನೆ ಮಾಡಲಾಗುವುದು.

ಮೊದಲ ದಿನ ಬೆಳಗ್ಗೆ 9 ಗಂಟೆಗೆ ಪ್ರತಿಷ್ಠಾಪನೆ ಪೂಜೆ, ಮಧ್ಯಾಹ್ನ 1ಕ್ಕೆ ಭಜನೆ, ಸಂಜೆ 5 ಕ್ಕೆ ಗೊಂದಲ ಕಾರ್ಯಕ್ರಮ, 7 ಗಂಟೆಗೆ ಮಂಗಳಾರತಿ, 7.30ಕ್ಕೆ ಗಂಗಾರತಿ ಮಾದರಿಯಲ್ಲಿ ಗಣೇಶ ಆರತಿ ನಡೆಯಲಿದೆ.

ಎರಡನೇ ದಿನ 28ರಂದು ಬೆಳಗ್ಗೆ 6.30 ರಿಂದ 7.30ರವರೆಗೆ ಯೋಗಾಸನ ಬಳಗದಿಂದ ಯೋಗ ಪೂಜೆ, 8 ಗಂಟೆಗೆ ಗಣೇಶನ ಪೂಜೆ, ಆರತಿ, 9 ರಿಂದ 11ರವರೆಗೆ ಗಣಹೋಮ, 11 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ವಟುಗಳಿಂದ ಗಣೇಶನ ಸ್ತೋತ್ರ, ಸಂಜೆ 5ಕ್ಕೆ ಭಜನೆ, 5.30 ರಿಂದ 7 ಗಂಟೆವರೆಗೆ ವಾರಕರಿ ಭಜನೆ, ಗಣೇಶ ವಂದನೆ, ರಾತ್ರಿ 8ಕ್ಕೆ ಗಣೇಶ ಆರತಿ ಜರುಗಲಿದೆ.

ಮೂರನೇ ದಿನ 27ರಂದು ಬೆಳಗ್ಗೆ 9ಕ್ಕೆ ಪೂಜೆ, 10 ಗಂಟೆಗೆ ಲೀಲಾವು ಕಾರ್ಯಕ್ರಮ, ಮಧ್ಯಾಹ್ನ 12 ಗಂಟೆಗೆ ವಿಸರ್ಜನೆ ಕಾರ್ಯಕ್ರಮ ನೆರವೇರಲಿದೆ.

ಈ ವರ್ಷ ಗಣೇಶ ವಿಸರ್ಜನೆ ಮೆರವಣಿಗೆಗೆ ಡಿಜೆ ಬಳಕೆ ಇಲ್ಲ. ಬದಲಾಗಿ, ದೇಶಿ ವಾದ್ಯಗಳನ್ನು ಬಳಸಲಾಗುತ್ತಿದೆ. ಜಾಂಜ್, ಲೈಜಿಮ್ ಭಜನಾ ಮಂಡಳಿ ಸೇರಿದಂತೆ 300ಕ್ಕೂ ಹೆಚ್ಚು ಕಲಾ ತಂಡಗಳು ಭಾಗವಹಿಸಲಿವೆ ಎಂದು ಮಹಾಮಂಡಳಿ ಅಧ್ಯಕ್ಷ ಸಂಜೀವ ಬಡಸ್ಕರ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷ ವಿ.ಎಸ್.ವಿ. ಪ್ರಸಾದ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net