ಶ್ರೀ ದೊಡ್ಡಮ್ಮ, ಚಿಕ್ಕಮ್ಮ ತಾಯಿ ದೇವಿಯ ವಿಗ್ರಹ ಪ್ರತಿಷ್ಠಾಪನೆ

ಶ್ರೀ ದೊಡ್ಡಮ್ಮ, ಚಿಕ್ಕಮ್ಮ ತಾಯಿ ದೇವಿಯ ವಿಗ್ರಹ ಪ್ರತಿಷ್ಠಾಪನೆ
Published on

ಬೆಟ್ಟದಪುರ: ಬೆಟ್ಟದಪುರ ಸಮೀಪದ ಹೊನ್ನಪುರ ಗ್ರಾಮದಲ್ಲಿ ಶ್ರೀ ದೊಡ್ಡಮ್ಮ ಹಾಗೂ ಶ್ರೀ ಚಿಕ್ಕಮ್ಮ ತಾಯಿ ದೇವಿಯ ವಿಗ್ರಹ ಪ್ರತಿಷ್ಠಾಪನೆ ಹಾಗೂ ದೇಗುಲ ಉದ್ಘಾಟನೆ ಕಾರ್ಯಕ್ರಮ ಭಾನುವಾರ ನಡೆಯಿತು.

ಧಾರ್ಮಿಕ ಸಭೆ ಕಾರ್ಯಕ್ರಮವನ್ನು ಪಶು ಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಗ್ರಾಮದಲ್ಲಿ ದೇಗುಲ ನಿರ್ಮಾಣ ಹಾಗೂ ಧಾರ್ಮಿಕ ಕಾರ್ಯಗಳಿಂದ ಎಲ್ಲರ ಭಾಂದವ್ಯ ಹಾಗೂ ಒಗ್ಗಟ್ಟು ಮತ್ತಷ್ಟು ಹೆಚ್ಚುತ್ತದೆ. ಗ್ರಾಮವು ಸದಾ ಕಾಲ ಶಾಂತಿಯಿಂದ ಇರಲಿ, ತಾಯಿಯ ಆಶೀರ್ವಾದ ಎಲ್ಲರ ಮೇಲೆ ಕರುಣಿಸಲಿ. ಹೊನ್ನಾಪುರ ಗ್ರಾಮಕ್ಕೆ ಸೋಪಾನ ಕಟ್ಟೆ, ರಸ್ತೆ ಅಭಿವೃದ್ಧಿ ನಿರ್ಮಾಣಕ್ಕೆ ಅನುದಾನ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ನಿವೇಶನ ಇಲ್ಲದ ಕಡುಬಡವರಿಗೆ ಗ್ರಾಮದಲ್ಲಿ ನಿವೇಶನ ಹಂಚಿಕೆ ಮಾಡಲಾಗುವುದು. ಗ್ರಾಮದ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಅಭಿವೃದ್ಧಿಪಡಿಸುತ್ತೇನೆ ಎಂದು ಭರವಸೆ ನೀಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಕೆ.ಮಹದೇವ್ ಮಾತನಾಡಿ, ನನ್ನ ಹಿಂದಿನ ಆಡಳಿತಾವಧಿಯಲ್ಲಿ ನೀಡಿದ ಸುಮಾರು ಹತ್ತು ಲಕ್ಷ ರೂ. ಅನುದಾನವನ್ನು ಗ್ರಾಮಸ್ಥರು ಒಗ್ಗಟ್ಟಿನಿಂದ ಬಳಸಿಕೊಂಡು ದೇವಾಲಯ ನಿರ್ಮಾಣ ಮಾಡಿರುವುದು ಸಾರ್ಥಕತೆಯನ್ನು ತಂದಿದೆ. ಕುಂಭಮೇಳ ನಡೆಯುತ್ತಿರುವ ಸಂದರ್ಭದಲ್ಲಿ ಗ್ರಾಮದ ಒಳಿತಿಗಾಗಿ ಶ್ರೀ ದೊಡ್ಡಮ್ಮ, ಶ್ರೀ ಚಿಕ್ಕಮ್ಮ ದೇವಿಯ ವಿಗ್ರಹಗಳ ಪ್ರತಿಷ್ಠಾಪನೆ ಮಾಡುತ್ತಿರುವುದು ಪುಣ್ಯದ ಕೆಲಸ ಎಂದರು.

ದೇವಸ್ಥಾನ ಉದ್ಘಾಟನೆ ಹಿನ್ನೆಲೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕೇಸರಿ ತೋರಣಗಳು, ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿತ್ತು. ಇದೇ ವೇಳೆ ಗ್ರಾಮದ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಂಡರು.

ಮಾಜಿ ಶಾಸಕ ಎಚ್.ಸಿ. ಬಸವರಾಜು, ದೊಡ್ಡಕಮರವಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಪುಟ್ಟಸ್ವಾಮಿ, ಸದಸ್ಯ ಸಿ.ಎನ್. ಹರೀಶ್, ಎಚ್.ಪಿ.ಶಿವಪ್ಪ, ಚಂದ್ರೇಗೌಡ , ಮುಖಂಡ ಎಚ್.ಎಚ್.ಶಿವಣ್ಣ, ವೀರತಪ್ಪ, ಶ್ರೀ ದೊಡ್ಡಮ್ಮ ಚಿಕ್ಕಮ್ಮ ತಾಯಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಎಚ್.ಎಸ್.ಕಿರಣ್‌ಕುಮಾರ್, ಉಪಾಧ್ಯಕ್ಷ ಎಚ್.ಎಸ್.ರಾಜೇಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net