

ಹನೂರು : ಗೌರಿ ಹಬ್ಬದ ಹಿನ್ನೆಲೆ ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಸ್ಥಳ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಶುಕ್ರವಾರ ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ನೇತೃತ್ವದಲ್ಲಿ ಅಂತರಗಂಗೆಯ ಗೌರಿ ಹೊಂಡದಿಂದ ಗಂಗೆ ಹಾಗೂ ಗೌರಮ್ಮನ ಮೂರ್ತಿಯನ್ನು ಮೆರವಣಿಗೆಯ ಮೂಲಕ ಕರೆತಂದು ಪ್ರತಿಷ್ಠಾಪಿಸಲಾಯಿತು.
ಹಬ್ಬದ ಹಿನ್ನೆಲೆಯಲ್ಲಿ ದೇಗುಲವನ್ನು ತಳಿರು, ತೋರಣ ಹಾಗೂ ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿತ್ತು. ಬೆಳಗ್ಗೆ 3.30 ರಿಂದ 6 ರವರೆಗೆ ಮಾದಪ್ಪನಿಗೆ ವಿವಿಧ ಅಭಿಷೇಕದ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಸಂಜೆ 5ರ ವೇಳೆಯಲ್ಲಿ ಉಪವಾಸವಿದ್ದ ಬೇಡಗಂಪಣ ಅರ್ಚಕರು ದೇಗುಲದಲ್ಲಿ ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.
ಬಳಿಕ ಭಕ್ತರು, ಅರ್ಚಕರು ಹಾಗೂ ಬೆಟ್ಟದ ನಿವಾಸಿಗಳು ವಾದ್ಯ ಮೇಳದೊಂದಿಗೆ ಸತ್ತಿಗೆ, ಸೂರಿಪಾನಿ, ಜಾಗಟೆ, ನಗಾರಿಗಳ ಸಮೇತ ಮೆರವಣಿಗೆಯ ಮೂಲಕ ಅಂತರಗಂಗೆಯ ಸಮೀಪದ ಗೌರಿ ಹೊಂಡಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ನೀರು ಜಿನುಗುತ್ತಿದ್ದಂತೆಯೇ ಸಾಲೂರು ಶ್ರೀಗಳ ಸಮ್ಮುಖದಲ್ಲಿ ಮುತ್ತೈದೆಯರ ವಸ್ತುಗಳಾದ ಕರಿಮಣಿ, ಕರಿಬಳೆ, ಬಿಚ್ಚೋಲೆ ಹಾಗೂ ಅರಿಸಿನ, ಕುಂಕುಮವನ್ನು ಹೊಂಡಕ್ಕೆ ಬಾಗಿನ ರೂಪದಲ್ಲಿ ಅರ್ಪಿಸಲಾಯಿತು. ಸ್ವಾಮಿಯ ಅಭಿಷೇಕಕ್ಕೆ ಬೆಳ್ಳಿ ಕೊಡಗ ಹಾಗೂ ಗೌರಿ ಕಳಸಕ್ಕೆ ಹೊಂಡದ ನೀರನ್ನು ತುಂಬಿ ಬಿಲ್ವಾರ್ಚನೆಯನ್ನು ನೆರವೇರಿಸಿ ಮಹಾಮಂಗಳಾರತಿ ಬೆಳಗಿಸಲಾಯಿತು.
ಪಲ್ಲಕ್ಕಿಯಲ್ಲಿ ಗೌರಿ ಮೂರ್ತಿಯ ಮೆರವಣಿಗೆ:
ಬಳಿಕ ಗೌರಿ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಿದ್ದ ಪಲ್ಲಕ್ಕಿಯಲ್ಲಿ ಕೂರಿಸಿ ನೀರು ತುಂಬಿದ ಕೊಡಗ ಹಾಗೂ ಗೌರಿ ಕಳಸವನ್ನು ಹೊತ್ತ ಅರ್ಚಕರು ಮೆರವಣಿಗೆಯ ಮೂಲಕ ದೇಗುಲಕ್ಕೆ ತಂದರು. ಪ್ರದಕ್ಷಿಣೆ ಹಾಕಿದರು. ಮಹಾ ಮಂಗಳಾರತಿಯನ್ನು ಬೆಳಗಿಸಿ ಗೌರಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಇದೇ ವೇಳೆ ಗೌರಿ ಕಳಸಕ್ಕೂ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಮೆರವಣಿಗೆಯಲ್ಲಿ ಸಾಕಾನೆ ಉಮಾ ಮಹೇಶ್ವರಿ ಭಾಗವಹಿಸಿದ್ದು ಎಲ್ಲರ ಗಮನ ಸೆಳೆಯಿತು. ಈ ಸಂದರ್ಭದಲ್ಲಿ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ್, ಪಾರುಪತ್ತೇಗಾರ ಮಹದೇವಸ್ವಾಮಿ ಪ್ರಾಧಿಕಾರದ ನೌಕರರು ಹಾಗೂ ಬೇಡಗಂಪಣ ಅರ್ಚಕರು ಹಾಗೂ ಭಕ್ತರು ಇದ್ದರು.
ಗೌರಮ್ಮನಿಗೆ 5 ದಿನ ಧಾನ್ಯ ಪೂಜೆಯ ಬಳಿಕ ವಿಸರ್ಜನೆ:
ನೀರು ತುಂಬಿದ ಕಳಸವನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಿ 5 ದಿನಗಳ ಕಾಲ ಬೇಡಗಂಪಣ ಸಂಪ್ರದಾಯದಂತೆ ಧಾನ್ಯಪೂಜೆ ನೆರವೇರಿಸಲಾಗುತ್ತದೆ. ಅದರಂತೆಯೇ ಶುಕ್ರವಾರ ಬೇಡಗಂಪಣ ಸಮುದಾಯದ ಮೊಣ್ಣೆಪಾಲಿನ ಗುಂಪಿನವರು ಅಕ್ಕಿ, ಬೆಲ್ಲ, ಹೆಸರುಬೇಳೆ ಹಾಗೂ ಇನ್ನಿತರೆ ಆಹಾರ ಧಾನ್ಯಗಳ ಪೂಜೆಯನ್ನು ಸಲ್ಲಿಸಿದರು. 2ನೇ ದಿನ ಶ್ರೀ ಮಲೆಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಗೌರಿ ಕಳಸಕ್ಕೆ ಪೂಜೆ ನಡೆಯಲಿದೆ. ಮೂರನೇ ದಿನ ದೊಡ್ಡಪಾಲಿನ ಬೇಡಗಂಪಣ ಕುಲದವರು, 4ನೇ ದಿನ ಚಿಕ್ಕಪಾಲು ಮನೆತನದವರು ಹಾಗೂ ಕೊನೆಯ ದಿನ ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರಿಂದ ವಿಶೇಷ ಪೂಜೆ ನೆರವೇರಿಸಿ ಸಮಾಪ್ತಿ ಮಾಡಲಾಗುತ್ತದೆ.
ಬಳಿಕ ಇದೇ ದಿನ ರಾತ್ರಿ ನೀರು ತುಂಬಿಸಿ ನಿತ್ಯ ಪೂಜೆ ಸಲ್ಲಿಸಲಾಗುತ್ತಿದ್ದ ಗೌರಿ ಕಳಸವನ್ನು ಮೆರವಣಿಗೆಯ ಮೂಲಕ ಅಂತರಗಂಗೆಯ ಗೌರಿ ಮಡುವಿಗೆ ಕೊಂಡೋಯ್ದು ಧೂಪ, ದೀಪದ ದೀವಾಟಿಕೆ ಸೇವೆಯ ಜತೆಗೆ ಏಕ ಆರತಿ, ಕಳಸ ಆರತಿ, ತ್ರಿ ಆರತಿ, ಪಂಚ ಆರತಿ, ನಕ್ಷತ್ರ ಆರತಿ ಹಾಗೂ ರಥದ ಆರತಿಯನ್ನು ಬೆಳಗಿಸುವುದರ ಮೂಲಕ ವಿಶೇಷ ಪೂಜಾ ಕೈಂಕರ್ಯವನ್ನು ನೆರವೇರಿಸಲಾಗುತ್ತದೆ. ಗೌರಿ ಮೂರ್ತಿಗೆ ನೈವೇದ್ಯ ಅರ್ಪಿಸಿ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ಬೆಳಗಿಸಿದ ಬಳಿಕ ಕಳಸವನ್ನು ವಿಸರ್ಜಿಸಲಾಗುತ್ತದೆ. ನಡೆಯುವ ಎಲ್ಲ ಧಾರ್ಮಿಕ ಕೈಂಕರ್ಯಗಳು ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಮ್ಮುಖದಲ್ಲಿ ನೆರವೇರಲಿದೆ.