ಸರ್‌ಎಂವಿ ಸ್ಟೇಡಿಯಂಗೆ ಪ್ಲಡ್‌ಲೈಟ್ ಅಳವಡಿಕೆ: ಶಾಸಕ ರವಿಕುಮಾರ್ ಗಣಿಗ ಮಾಹಿತಿ

Installation of floodlights for SirMV Stadium Mandya
Published on

ಮಂಡ್ಯ: ಸರ್‌ಎಂವಿ ಜಿಲ್ಲಾ ಕ್ರೀಡಾಂಗಣಕ್ಕೆ ಪ್ಲಡ್‌ಲೈಟ್ ಅಳವಡಿಸಲು ಹಣ ಬಿಡುಗಡೆ ಮಾಡಲಾಗುವುದು. ಅದರಂತೆ ಮುಂದಿನ ದಿನದಲ್ಲಿ ರಾತ್ರಿ ವೇಳೆಯೂ ಕ್ರೀಡಾಕೂಟ ನಡೆಯುವಂತೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.

ನಗರದ ಸರ್‌ಎಂವಿ ಕ್ರೀಡಾಂಗಣದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಆದರ್ಶ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ದ ಮಂಡ್ಯ ತಾಲೂಕುಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲಾ ಕ್ರೀಡಾಂಗಣವನ್ನು 10 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿ ಮಾಡಿ ಉದ್ಘಾಟನೆ ಮಾಡಲಾಗಿದೆ. ಅಂತೆಯೇ ಕ್ರೀಡಾಪಟುಗಳ ಅನುಕೂಲಕ್ಕಾಗಿ ವಾಲಿಬಾಲ್ ಅಂಕಣ ಮಾಡಲು 30 ಲಕ್ಷ ರೂ ವೆಚ್ಚ ಮಾಡಲಾಗುತ್ತಿದೆ ಎಂದರು.

ಮಂಡ್ಯ ಹಲವು ದಿನದಲ್ಲಿ ಬದಲಾಗಿದೆ. ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಮಾ ಹಾಗೂ ಟಿಬೆಟಿಯನ್ ಧರ್ಮ ಗುರು ದಲೈಲಾಮ ಅವರು ಅತಿ ಶೀಘ್ರದಲ್ಲಿ ಹಲ್ಲೇಗೆರೆ ಧ್ಯಾನ ಮಂದಿರ ಕೇಂದ್ರ ಉದ್ಘಾಟಿಸಲು ಬರುತ್ತಿದ್ದಾರೆ ಎಂದ ಅವರು, ಖಾಸಗಿ ವಿದ್ಯಾಸಂಸ್ಥೆಗಳು ಸರ್ಕಾರದ ಜತೆ ಕೈಜೋಡಿಸಿದಾಗ ಹಲವು ಯೋಜನೆಗಳನ್ನು ಜಾರಿಗೆ ತರಬಹುದು. ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಗೆಲುವು ಸೋಲನ್ನು ಸಮಾನವಾಗಿ ತೆಗೆದುಕೊಳ್ಳಬೇಕು. ಪಾಠದಷ್ಟೇ ಪ್ರಾಮುಖ್ಯತೆಯನ್ನು ಕ್ರೀಡೆಗೂ ಕೊಡಬೇಕು ಎಂದು ಸಲಹೆ ನೀಡಿದರು.

ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಅಧ್ಯಯನ ವಿದ್ಯಾಟ್ರಸ್ಟ್ ಉಪಾಧ್ಯಕ್ಷ ಶಶಾಂಕ್, ಪ್ರಾಂಶುಪಾಲ ಪ್ರೊ.ಎಸ್.ಡಿ. ದೊಡ್ಡಾಚಾರ್, ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷ ನಟರಾಜು, ಕಾರ್ಯದರ್ಶಿ ಕಾಂತರಾಜು, ನೋಡಲ್ ಅಧಿಕಾರಿ ಗುರುಲಿಂಗೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net