ಮಕ್ಕಳಿಗೆ ಧಾರ್ಮಿಕ ಸಂಸ್ಕಾರ ಮುಖ್ಯ

web 4
Published on

ಧಾರವಾಡ: ಪ್ರಯತ್ನಶೀಲನು, ಸತ್ಕಾರ್ಯ ಮಾಡುವವನು, ಸಂಯಮಿ ಮತ್ತು ಧರ್ಮ ಕಾರ್ಯ ಮಾಡುವವನ ಜೀವನ ಸದಾ ಯಶಸ್ಸಿನಿಂದ ಕೂಡಿರುತ್ತದೆ. ಸಂಸ್ಕೃತಿ- ಸಂಸ್ಕಾರದಿಂದ ವಂಚಿತರಾಗುತ್ತಿರುವ ಮಕ್ಕಳಿಗೆ ಧಾರ್ಮಿಕ ತಿಳಿವಳಿಕೆ ನೀಡುವ ಅಗತ್ಯವಿದೆ ಎಂದು ಶ್ರೀ ಅಮಿತಂಜನಮುನಿ ಮಹಾರಾಜರು ಹೇಳಿದರು.
ನಗರದ ಜೈನ ಸಮಾಜದಿಂದ ಇಲ್ಲಿನ ಸನ್ಮತಿ ಜನಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಚಾತುರ್ಮಾಸ ಕಳಶ ಸ್ಥಾಪನ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಮಕ್ಕಳಿಗೆ ಬಾಲ್ಯದಲ್ಲಿ ತಂದೆ- ತಾಯಿಯ ಸಂಸ್ಕಾರ, ತಾರುಣ್ಯಾವಸ್ಥೆಯಲ್ಲಿ ಗುರುವಿನ ಸಂಸ್ಕಾರ ಮುಖ್ಯವಾಗಿರುತ್ತದೆ. ಇಂದು ಶ್ರಾವಕರಲ್ಲಿ ಧರ್ಮದ ಆಚರಣೆ ಕುಂದುತ್ತಿದ್ದು, ಉತ್ತಮ ಶ್ರಾವಕರನ್ನು ಸಿದ್ಧಪಡಿಸುವ ಜವಾಬ್ದಾರಿ ಸಮಾಜದ ಮೇಲಿದೆ. ದಾನ ಮಾಡುವುದು ಹೃದಯದ ಒಳ್ಳೆಯ ಗುಣವಾಗಿದ್ದು, ದಾನದಿಂದ ಲ ಖಚಿತ ಎಂದರು.
ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ್ ಮಾತನಾಡಿ, ಸುಮಾರು 150 ವರ್ಷಗಳ ಹಿಂದೆ ಅನ್ಯಧರ್ಮೀಯರ ದುರಾಡಳಿತದಿಂದ ನಶಿಸಿಹೋಗಿದ್ದ ಮುನಿ ಪರಂಪರೆಗೆ ಪುನರುಜ್ಜೀವನ ಕೊಟ್ಟ ಹಾಗೂ ಭಾರತಾದ್ಯಂತ ಜೈನ ಧರ್ಮದ ಪತಾಕೆಯನ್ನು ಹಾರಿಸಿದ ಶ್ರೇಯಸ್ಸು ಚಾರಿತ್ರ ಚಕ್ರವರ್ತಿ ಶ್ರೀ ಶಾಂತಿಸಾಗರ ಮುನಿಗಳಿಗೆ ಸಲ್ಲುತ್ತದೆ ಎಂದರು.
ಧರ್ಮಾನುರಾಗಿ ಶಾಂತಿನಾಥ ಹೋತಪೇಟ್ ಮಾತನಾಡಿ, ತ್ಯಾಗಿಗಳ ಸೇವೆಯಿಂದ ಜೀವನ ಪಾವನವಾಗುತ್ತದೆ ಎಂದರು.
ಡಾ. ಜಿನದತ್ತ ಹಡಗಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಬಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸುಮನ ವಜ್ರಕುಮಾರ, ನಂದಿನಿ ಬಾಗಿ, ಸುಜಾತಾ ಹಡಗಲಿ, ರಾಜೇಂದ್ರ ಬೀಳಗಿ, ಅಶೋಕ ಬಾಗಿ, ಪಾರ್ಶ್ವನಾಥ ಶೆಟ್ಟಿ, ಅಶೋಕ ಬಾಳಿಕಾಯಿ, ಮಹಾವೀರ ಉಪಾಧ್ಯೆ, ಪಿ.ಎಸ್. ಅಂಗಡಿ, ಮಂಜುನಾಥ ಪಂಡಿತ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net