ಆಕರ್ಷಕ ಮೂರ್ತಿಗಳ ಪ್ರತಿಷ್ಠಾಪನೆ

KDR ganapa
ಕಡೂರು ಪಾಂಡುರಂಗ ಕಲ್ಯಾಣ ಮಂಟಪದಲ್ಲಿ ಭಾವಸಾರ ಕ್ಷತ್ರಿಯ ಯುವ ಮಂಡಳಿಯಿಂದ ಸಂತ ತುಕಾರಾಂ ಗಣಪನನ್ನು ಪ್ರತಿಷ್ಠಾಪಿಸಿರುವುದು.
Published on

ಕಡೂರು: ಗಣೇಶ ಚತುರ್ಥಿಯನ್ನು ತಾಲೂಕಿನಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ವಿಶೇಷವಾಗಿ ಚೌತಿನಾಗರ ಪೂಜೆ ನೆರವೇರಿಸಲಾಯಿತು.

ಗೃಹಿಣಿಯರು ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಗ್ರಾಮೀಣ ಭಾಗದ ಕೆರೆಕಟ್ಟೆಗಳಲ್ಲಿ ಗೌರಿಪೂಜೆ ನೆರವೇರಿಸಿದರು. ಪಟ್ಟಣ ಪ್ರದೇಶದ ಮನೆಗಳಲ್ಲಿ ಕಲಶ ಪ್ರತಿಷ್ಠಾಪಿಸಿದರು. ಮಹಿಳೆಯರಿಗೆ ಬಾಗಿನ ಕೊಡಲಾಯಿತು. ಮಹಿಳೆಯರು ಗೌರಿದಾರಗಳನ್ನು ಕಟ್ಟಿ ಗೌರಿ ಪೂಜೆ ನೆರವೇರಿಸಿದರು. ನಾಗರಕಟ್ಟೆ, ಹುತ್ತಗಳಿಗೆ ಹಾಲು-ತುಪ್ಪ ಎರೆದು ಪೂಜೆ ಸಲ್ಲಿಸಲಾಯಿತು. ಮನೆಗಳಲ್ಲಿ ಗೌರಿ ಗಣಪನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಹಬ್ಬ ಆಚರಿಸಿದರು. ಗಣೇಶ ಸಂಘಟನೆ ಯುವಕ ಬಳಗದವರು ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿದರು.
ಚಿಕ್ಕಿಂಗಳ ಗ್ರಾಮದ ಮೂರ್ತಿ ತಯಾರಕ, ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾವಿದ ಪ್ರಮೋದ್ ಪುಟ್ಟ ಗೌರಿ ಗಣೇಶ ಮೂರ್ತಿಯನ್ನು ತಯಾರಿಸಿ ಮನೆಯಲ್ಲೇ ಪ್ರತಿಷ್ಠಾಪಿಸಿದ್ದಾರೆ. ಮೂರ್ತಿಗಳು ಆಕರ್ಷಕವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳು ವೈರಲ್‌ಗೊಂಡಿವೆ.
ಪಟ್ಟಣದ ಪಾಂಡುರಂಗ ಕಲ್ಯಾಣ ಮಂಟಪದಲ್ಲಿ ಭಾವಸಾರ ಕ್ಷತ್ರಿಯ ಯುವ ಮಂಡಳಿಯಿಂದ 4 ಅಡಿ ಎತ್ತರದ ಭಕ್ತಿಶ್ರೇಷ್ಠ ಸಂತ ತುಕಾರಾಂ ಗಣಪನನ್ನು ಪ್ರತಿಷ್ಠಾಪಿಸಲಾಗಿದೆ. ಜತೆಯಲ್ಲಿ ಎರಡು ಇಲಿಗಳು ತಂಬೂರಿ ಮತ್ತು ಭಜನಾ ನೃತ್ಯ ಭಂಗಿಯ ಶೈಲಿಯಲ್ಲಿ ಪ್ರತಿಷ್ಠಾಪಿಸಿರುವುದು ಎಲ್ಲರ ಗಮನ ಸೆಳೆಯುತ್ತಿದೆ.
ಪಟ್ಟಣದಲ್ಲಿ ಜಿಪಂ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ ನಿವಾಸದಲ್ಲಿ ಶೂನ್ಯತ್ಯಾಜ್ಯ ಎಂಬ ಪರಿಕಲ್ಪನೆಯೊಂದಿಗೆ ಮಂಡ್ಯದ ಆಲೆಮನೆಯ ಬೆಲ್ಲದ ಅಚ್ಚಿನಲ್ಲಿ ವಿಶೇಷವಾಗಿ ತಯಾರಾದ ಗೌರಿ ಗಣಪನನ್ನು ಪ್ರತಿಷ್ಠಾಪಿಸಿ ಪೂಜಿಸಲಾಯಿತು. ಪರಿಸರ ಪೂರಕವಾಗಿ ಕೇಸರಿ, ಹಾರ್ಲಿಕ್ಸ್, ಹಳದಿ ಬಣ್ಣದ ಪೌಡರ್ ಬಳಸಿ ಮೂರ್ತಿಗಳನ್ನು ಶೃಂಗಾರಗೊಳಿಸಿ ಪೂಜಿಸಲಾಯಿತು. ಸಂಜೆ ಪಾತ್ರೆಯಲ್ಲಿ ಬೆಲ್ಲದ ಅಚ್ಚಿನ ಗಣೇಶಮೂರ್ತಿಯನ್ನು ವಿಸರ್ಜಿಸಿ ನೀರನ್ನು ಪಾನಕದ ರೀತಿಯಲ್ಲಿ ನೆರೆಹೊರೆಯವರಿಗೆ ಹಂಚಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net