

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಮುಂಡಾಜೆ ಗ್ರಾಪಂ ವ್ಯಾಪ್ತಿಯ ಹಲವು ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಮುಂಡಾಜೆ ಗ್ರಾಪಂ ವ್ಯಾಪ್ತಿಯಲ್ಲಿ ನೇತ್ರಾವತಿ, ಮೃತ್ಯುಂಜಯ ನದಿ, ರಾಷ್ಟ್ರೀಯ ಹೆದ್ದಾರಿ, ಮುಂಡಾಜೆ-ಕಾಪು ರಕ್ಷಿತಾರಣ್ಯ ಇತ್ಯಾದಿ ಇದ್ದು, ಇಲ್ಲಿನ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಸ್ಥಾಪಿಸಲಾಗಿದೆ.
ಪ್ರಥಮ ಹಂತದಲ್ಲಿ ಕಾಪು ಕಿಂಡಿ ಅಣೆಕಟ್ಟು, ದಿಡುಪೆ ರಸ್ತೆ, ನಿಡಿಗಲ್ ನೇತ್ರಾವತಿ ನದಿ, ಸೇತುವೆ, ಸೀಟು ಅರಣ್ಯ ಪ್ರದೇಶದ ಅಲ್ಲಲ್ಲಿ ಸಿಸಿ ಕ್ಯಾಮರಾ ಹಾಕಲಾಗಿದೆ. ಇಲ್ಲಿನ ನದಿಗಳು, ಅರಣ್ಯ, ಸೇತುವೆ, ಕಿಂಡಿ ಅಣೆಕಟ್ಟು ಪ್ರದೇಶದಲ್ಲಿ ತ್ಯಾಜ್ಯ ತಂದು ಹಾಕುವುದು ಸಾಮಾನ್ಯ. ಪಂಚಾಯಿತಿಯ ಹೆಚ್ಚಿನ ಸಂಪನ್ಮೂಲ ತ್ಯಾಜ್ಯ ವಿಲೇವಾರಿಗೆ ವ್ಯಯವಾಗುತ್ತಿದೆ.
ಸ್ಥಳೀಯ ಸಹಿತ ಇತರ ಗ್ರಾಮಗಳ ಪೇಟೆಗಳಿಂದ ಮುಂಡಾಜೆ ಗ್ರಾಪಂ ವ್ಯಾಪ್ತಿಯ ಹಲವೆಡೆ ತ್ಯಾಜ್ಯ ತಂದು ಹಾಕುವುದು ಅಭ್ಯಾಸವಾಗಿದೆ. ಅಲ್ಲದೆ ಇಲ್ಲಿನ ಸೇತುವೆ, ನದಿ ಪ್ರದೇಶಗಳಲ್ಲಿ ಅನಪೇಕ್ಷಿತ ಚಟುವಟಿಕೆ ಕಂಡುಬರುತ್ತದೆ. ಇವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಸಿಸಿ ಕ್ಯಾಮೆರಾ ದೃಶ್ಯಾವಳಿ ಪಂಚಾಯಿತಿ ವ್ಯವಸ್ಥೆಗೆ, ಸಂಬಂಧಪಟ್ಟ ವ್ಯಕ್ತಿಗಳ ಮೊಬೈಲ್ಗಳಲ್ಲಿ ದಾಖಲಾಗುವುದರಿಂದ ಅನಪಕ್ಷಿತ ಚಟುವಟಿಕೆ ನಡೆಸುವವರನ್ನು ಪತ್ತೆಹಚ್ಚಲು ಸುಲಭವಾಗಿದೆ. ಮುಂದಿನ ಹಂತದಲ್ಲಿ ಇಲ್ಲಿನ ರುದ್ರಭೂಮಿ ಸಹಿತ ಇನ್ನಷ್ಟು ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವ ಕುರಿತು ಯೋಚಿಸಲಾಗಿದೆ ಎಂದು ಗ್ರಾಪಂ ಅಧ್ಯಕ್ಷ ಗಣೇಶ್ ಬಂಗೇರ, ಪಿಡಿಒ ಗಾಯತ್ರಿ ತಿಳಿಸಿದ್ದಾರೆ.