

ನಾಯಕನಹಟ್ಟಿ: ದೊಡ್ಡ ಪ್ರಮಾಣದ ಗಣಪತಿ ಪೆಂಡಾಲ್‌ಗಳಲ್ಲಿ ಸಿಸಿ ಕ್ಯಾಮರಾ ಕಡ್ಡಾಯವಾಗಿ ಅಳವಡಿಸಬೇಕು ಎಂದು ತಳಕು ಸಿಪಿಐ ಸಮೀವುಲ್ಲಾ ಸೂಚಿಸಿದರು.
ಶುಕ್ರವಾರ ಪಟ್ಟಣದಲ್ಲಿ ಏರ್ಪಡಿಸಿದ್ದ ಗಣೇಶ, ಈದ್ ಮಿಲಾದ್ ಶಾಂತಿ ಸಭೆಯಲ್ಲಿ ಮಾತನಾಡಿದರು.
ದೊಡ್ಡ ಪ್ರಮಾಣದಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸುವವರು ಸ್ಥಳೀಯ ಆಡಳಿತ, ಬೆಸ್ಕಾಂ ಹಾಗೂ ಸ್ಥಳದ ಮಾಲೀಕರಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಗಣಪತಿ ಪ್ರತಿಷ್ಠಾಪನೆಯಿಂದ ವಿಸರ್ಜನೆಯವರೆಗೂ ಆಯೋಜಕರು ಸ್ಥಳದಲ್ಲಿಯೇ ರಕ್ಷಣೆ ನೀಡಬೇಕು. ಪ್ರತಿಷ್ಠಾಪನೆಯಿಂದ ಮೆರವಣಿಗೆಯವರೆಗೂ ಪೊಲೀಸ್ ಇಲಾಖೆ ನಿಯಮಗಳನ್ನು ಪಾಲಿಸಬೇಕು. ಉಲ್ಲಂಘಿಸಿದರೆ ಕ್ರಮ ಖಚಿತ ಎಂದು ಎಚ್ಚರಿಸಿದರು.
ಪ್ರತಿಷ್ಠಾಪನೆಯ ಸ್ಥಳದಲ್ಲಿ ರಕ್ಷಣೆ ಒದಗಿಸುವ ಸಮಿತಿಯ ಹೆಸರುಗಳ ಪಟ್ಟಿಯನ್ನು ವೇಳಾಪಟ್ಟಿಯಂತೆ ಪೊಲೀಸರಿಗೆ ಮಾಹಿತಿ ನೀಡಬೇಕು. ಎಲ್ಲ ಪ್ರದೇಶಗಳಲ್ಲಿಯೂ ಪೊಲೀಸ್ ಬಂದೋಬಸ್ತ್ ನೀಡಲು ಸಾಧ್ಯವಿಲ್ಲ. ಹೀಗಾಗಿ ಆಯೋಜಕರೇ ಪ್ರದೇಶದ ಉಸ್ತುವಾರಿ ನಿರ್ವಹಿಸಬೇಕು. ಗಣಪತಿ ಮೆರವಣಿಗೆ ವೇಳೆಯಲ್ಲಿ ಡಿಜೆಗೆ ಅವಕಾಶವಿಲ್ಲ ಎಂದರು.
ಪಿಎಸ್‌ಐ ದೇವರಾಜ್ ಮಾತನಾಡಿ, ಕಾನೂನುಗಳು ಜನರ ಆಸ್ತಿ, ಜೀವ ರಕ್ಷಣೆಯ ಉದ್ದೇಶವನ್ನು ಹೊಂದಿವೆ. ಇವುಗಳನ್ನು ಹೇರಿಕೆ ಎಂದು ಭಾವಿಸಬಾರದು. ಇವುಗಳನ್ನು ಅನುಸರಿಸಿದರೆ ಯಾವುದೇ ಸಮಸ್ಯೆಗಳು ಉಂಟಾಗುವುದಿಲ್ಲ ಎಂದು ಕಿವಿಮಾತು ಹೇಳಿದರು.
ಬೆಸ್ಕಾಂ ಸೆಕ್ಷನ್ ಇಂಜಿನಿಯರ್ ಬೋರಯ್ಯ, ಪಪಂ ಸಿಬ್ಬಂದಿ ಸಂದೀಪ್, ಮುಖಂಡರಾದ ಎಂ.ವೈ.ಟಿ.ಸ್ವಾಮಿ, ಯೂಸುಫ್, ವೇಣುಗೋಪಾಲ್, ಪಿ.ಶಿವಣ್ಣ, ಮನ್ಸೂರ್ ಮತ್ತಿತರರಿದ್ದರು.