

ಗಂಗಾವತಿ: ಜಗತ್ತಿನ ಮೊಟ್ಟಮೊದಲು ಸಂವಿಧಾನ ಪರಿಕಲ್ಪನೆ 12ನೇ ಶತಮಾನದಲ್ಲಿ ರಚಿಸಲಾಗಿದ್ದು, ಅನುಭವ ಮಂಟಪದಲ್ಲಿ ಸಮಾನತೆಗೆ ಸಂಕೇತವಾಗಿತ್ತು ಎಂದು ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ನಗರದ ಬಾಬೂ ಜಗಜೀವನರಾಮ್ ವೃತ್ತದಲ್ಲಿ ಜಗಜ್ಯೋತಿ ಬಸವೇಶ್ವರ ಟ್ರಸ್ಟ್ನಿಂದ ಶುಕ್ರವಾರ ಹಮ್ಮಿಕೊಂಡಿದ್ದ ಶ್ರೀ ಬಸವೇಶ್ವರರ ಅಶ್ವಾರೂಢ ಕಂಚಿನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.
ನೆಲದ ಇತಿಹಾಸದಲ್ಲಿ 12ನೇ ಶತಮಾನ ಮಹತ್ವವಾಗಿದ್ದು, ಕಲ್ಯಾಣದ ಮೂಲಕ ದೂರದೃಷ್ಟಿಯ ಸಮಾಜ ನಿರ್ಮಾಣಕ್ಕೆ ಕಾರಣವಾಗಿತ್ತು. ಬಿದ್ದವರನ್ನು ಮೇಲೆತ್ತುವುದು, ಹಸಿದವರಿಗೆ ಅನ್ನ ನೀಡುವುದು ಮತ್ತು ದುಃಖದಲ್ಲಿದ್ದವರಿಗೆ ಕಣ್ಣೀರು ಒರೆಸುವುದನ್ನು ಹೇಳಿಕೊಟ್ಟವರೇ ಬಸವಣ್ಣ. ಜೀವನ ಅನುಭವಗಳನ್ನೇ ವಚನಗಳನ್ನಾಗಿ ಪರಿವರ್ತಿಸಲು ಶರಣರಿಗೆ ಪ್ರೇರಣೆ ನೀಡಿದ ಬಸವಣ್ಣನವರ ಕಾಯಕ, ದಾಸೋಹ ಸರ್ವಕಾಲಿಕ ಮಾನ್ಯತೆ ಪಡೆದಿವೆ ಎಂದರು.
ಬಸವ ಸಮಿತಿ ಅಧ್ಯಕ್ಷ ಅರವಿಂದ ಬಸಪ್ಪ ಜತ್ತಿ ಮಾತನಾಡಿ, ವಿಶ್ವದ 37 ಭಾಷೆಯಲ್ಲಿ ಬಸವಣ್ಣನವರ ವಚನಗಳನ್ನು ಕಾಣಬಹುದಾಗಿದ್ದು, ಥೇಮ್ಸ್ ನದಿ ದಡದಲ್ಲೂ ಬಸವಣ್ಣನವರ ಮೂರ್ತಿಯಿದೆ. ವಿಶ್ವದ ಸಾಂಸ್ಕೃತಿಕ ನಾಯಕನನ್ನಾಗಿ ೋಷಿಸಬೇಕಿದೆ ಎಂದರು.
ಸಂಸದ ಕರಡಿ ಸಂಗಣ್ಣ, ಶಾಸಕ ಗಾಲಿ ಜನಾರ್ದನರೆಡ್ಡಿ ಮತ್ತು ಅಧ್ಯಕ್ಷತೆವಹಿಸಿದ್ದ ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿದರು.
ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರು, ಅರಳಹಳ್ಳಿಯ ಗವಿಸಿದ್ದೇಶ್ವರ ಸ್ವಾಮೀಜಿ, ಸುಳೇಕಲ್ ಬೃಹನ್ಮಠದ ಪದ್ಮಾಕ್ಷರಯ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು.
ಮಾಜಿ ಸಂಸದರಾದ ಎಚ್.ಜಿ.ರಾಮುಲು, ಎಸ್.ಶಿವರಾಮನಗೌಡ, ಮಾಜಿ ಸಚಿವ ಎಂ.ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಶಾಸಕರಾದ ಜಿ.ವೀರಪ್ಪ, ಬಸವರಾಜ ದಢೇಸೂಗೂರು, ಮಾಜಿ ಎಂಎಲ್ಸಿ ಎಚ್.ಆರ್. ಶ್ರೀನಾಥ, ಟ್ರಸ್ಟ್ ಅಧ್ಯಕ್ಷ ಮಹಾಲಿಂಗಪ್ಪ ಬನ್ನಿಕೊಪ್ಪ, ಕಾರ್ಯದರ್ಶಿ ರಾಚಪ್ಪ ಸಿದ್ದಾಪುರ ಇತರರಿದ್ದರು. ನಂತರ ಬಸವೇಶ್ವರ ಕಲಾ ಸಂಘದ ಕಲಾವಿದರಿಂದ ಶಿವಶರಣ ಮಡಿವಾಳ ಮಾಚಿದೇವ ನಾಟಕ ಪ್ರದರ್ಶಿಸಲಾಯಿತು.