ಕಲ್ಸಂಕ ಜಂಕ್ಷನ್​ನಲ್ಲಿ ಮತ್ತೆ ಬ್ಯಾರಿಕೇಡ್​ ಅಳವಡಿಕೆ

udp-9-kalsanka
Published on

ಉಡುಪಿ: ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ನಗರಕ್ಕೆ ಯಾತ್ರಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀೆ ಇರುವುದರಿಂದ ಕಲ್ಸಂಕ ಜಂಕ್ಷನ್​ನಲ್ಲಿ ವಾಹನ ದಟ್ಟಣೆ ನಿರ್ವಹಣೆ ಸಾಧ್ಯವಾಗದೆ ಪೊಲೀಸರು ಕೈಚೆಲ್ಲಿದ್ದು, ಬ್ಯಾರಿಕೇಡ್​ ಅಳವಡಿಸುವ ಮೂಲಕ ಕಡಿಯಾಳಿ ಮತ್ತು ಸಿಟಿ ಬಸ್​ ನಿಲ್ದಾಣ ಬಳಿ ಯೂರ್ಟನ್​ ನೀಡಿದ್ದಾರೆ.

ಡಿಸೆಂಬರ್​ ತಿಂಗಳಲ್ಲಿ ಉಡುಪಿಗೆ ಪ್ರವಾಸಿಗರ ದಂಡು ಹರಿದು ಬಂದ ಕಾರಣ ನಗರದ ಎಲ್ಲೆಡೆ ಟ್ರಾಫಿಕ್​ ಜಾಮ್​ ಉಂಟಾಗಿತ್ತು. ಸುಗಮ ಸಂಚಾರಕ್ಕಾಗಿ ಜ.1ರವರೆಗೆ ಕೃಷ್ಣ ಮಠಕ್ಕೆ ಪ್ರವೇಶ ಕಲ್ಪಿಸುವ ಕಲ್ಸಂಕ ಜಂಕ್ಷನ್​ನಲ್ಲಿ ಬ್ಯಾರಿಕೇಡ್​ ಅಳವಡಿಸಿ ಕಡಿಯಾಳಿಯಲ್ಲಿ ಯೂರ್ಟನ್​ ಪಡೆದು ರಾಜಾಂಗಣ ಪಾರ್ಕಿಂಗ್​ ಪ್ರದೇಶಕ್ಕೆ ತೆರಳಬೇಕಿತ್ತು. ಇದೀಗ ಶನಿವಾರದಿಂದ ಮಂಗಳವಾರದವರೆಗೆ 4 ದಿನ ರಜೆ ಹಿನ್ನೆಲೆಯಲ್ಲಿ ಯಾತ್ರಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀೆ ಇರುವುದರಿಂದ ಜಿಲ್ಲಾ ಪೊಲೀಸ್​ ಅಧೀಕ್ಷಕರ ಸೂಚನೆ ಮೇರೆಗೆ ಬ್ಯಾರೆಕೇಡ್​ಗಳನ್ನು ಮತ್ತೆ ಅಳವಡಿಸಲಾಗಿದೆ. ಹೀಗಾಗಿ ಉಡುಪಿಯಿಂದ ಮಣಿಪಾಲಕ್ಕೆ ಹಾಗೂ ಮಣಿಪಾಲದಿಂದ ಉಡುಪಿಗೆ ನೇರ ಸಂಚಾರ ಕಲ್ಪಿಸಲಾಗಿದೆ. ಗುಂಡಿಬೈಲಿನಿಂದ ಬರುವವರು ಕಡಿಯಾಳಿಯಲ್ಲಿ ಯೂರ್ಟನ್​ ಪಡೆದು ನಗರ ಪ್ರವೇಶಿಸಬೇಕು. ಅದೇರೀತಿ ಕೃಷ್ಣ ಮಠದಿಂದ ಮಣಿಪಾಲಕ್ಕೆ ತೆರಳುವವರು ಸಿಟಿ ಬಸ್​ ನಿಲ್ದಾಣದಲ್ಲಿ ಯೂರ್ಟನ್​ ಪಡೆದು ಮುಂದುವರಿಯಬೇಕು.

ಸಮನ್ವಯದ ಕೊರತೆ

ಬೆಂಗಳೂರಿನಂತ ಬೃಹತ್​ ನಗರದಲ್ಲಿ ಸಿಗ್ನಲ್​ ಮೂಲಕ ಟ್ರಾಫಿಕ್​ ನಿಯಂತ್ರಣ ಮಾಡಲಾಗುತ್ತದೆ. ಆದರೆ 2 ಲಕ್ಷ ಜನಸಂಖ್ಯೆ ಹೊಂದಿರುವ ಉಡುಪಿಯಲ್ಲಿ ಸಿಗ್ನಲ್​ ಮೂಲಕ ಸಂಚಾರ ದಟ್ಟಣೆ ನಿಯಂತ್ರಣ ಸಾಧ್ಯವಿಲ್ಲವೇ ಎಂಬುದು ಸಾರ್ವಜನಿಕರ ಪ್ರಶ್ನೆ. ಪೊಲೀಸ್​ ಇಲಾಖೆ ಮತ್ತು ನಗರಸಭೆ ಮಧ್ಯೆ ಸಮನ್ವಯದ ಕೊರತೆಯಿಂದ ಸಿಗ್ನಲ್​ ಅಳವಡಿಕೆ ನಿಧಾನವಾಗುತ್ತಿದೆ. ಒಬ್ಬರು ಮತ್ತೊಬ್ಬರ ಕಡೆಗೆ ಬೆರಳು ತೋರಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದು, ವಾಹನ ಸವಾರರು ಸಂಕಷ್ಟ ಎದುರಿಸುವಂತಾಗಿದೆ.

ಸಿಗ್ನಲ್​ ಅಳವಡಿಕೆಗೆ ಏನು ಕಷ್ಟ?

ಅಂಬಲಪಾಡಿ, ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಮಗಾರಿ ನಡೆಯುತ್ತಿವುದರಿಂದ ನಗರದ ಎಲ್ಲ್ಲೆಡೆ ಟ್ರಾಫಿಕ್​ ನಿಯಂತ್ರಣಕ್ಕೆ ಪೊಲೀಸರಲ್ಲಿಯೂ ಸಿಬ್ಬಂದಿ ಕೊರತೆ ಉಂಟಾಗಿದೆ. ಹೀಗಾಗಿ ಕಲ್ಸಂಕದಲ್ಲಿ ಇಬ್ಬರು ಪೊಲೀಸರಿಂದ ಟ್ರಾಫಿಕ್​ ನಿಯಂತ್ರಣ ಅಸಾಧ್ಯವಾಗಿದೆ. ಪೊಲೀಸರು ಕೈ ತೋರಿಸದೆ ಚಾಲಕರು ವಾಹನ ನಿಲ್ಲಿಸುತ್ತಿಲ್ಲ. ಗುಂಡಿಬೈಲು ಕಡೆಯಿಂದ ಮತ್ತು ಕೃಷ್ಣ ಮಠದ ಕಡೆಯಿಂದ ಬಂದ ವಾಹನಗಳು ನಿಂತೇ ಇರಬೇಕು. ಮಣಿಪಾಲ ಮತ್ತು ಉಡುಪಿ ಕಡೆಯ ವಾಹನಗಳು ಸಾಗುತ್ತಲೇ ಇರುತ್ತವೆ. ಇದರಿಂದ ಸಂಚಾರ ಸಮಸ್ಯೆ ಎದುರಾಗಿದೆ. ಇದಕ್ಕೆ ಸಿಗ್ನಲ್​ ಹಾಕುವುದೇ ಪರಿಹಾರ. ನಾಲ್ಕು ದಿಕ್ಕಿನಲ್ಲಿ 1 ನಿಮಿಷದ ಸಿಗ್ನಲ್​ ಅಳವಡಿಸಿದರೆ ಪೊಲೀಸರ ಅರ್ಧಾಂಶ ಕೆಲಸ ಕಡಿಮೆಯಾಗುತ್ತದೆ. ಚಾಲಕರು ಸಿಗ್ನಲ್​ ಲೈಟ್​ ನೋಡಿ ವಾಹನ ನಿಲ್ಲಿಸುತ್ತಾರೆ.

ಪೊಲೀಸ್​ ಇಲಾಖೆಯಿಂದ ವರದಿ ಪಡೆದು ವೈಜ್ಞಾನಿಕವಾಗಿ ಸಿಗ್ನಲ್​ ಲೈಟ್​ ಅಳವಡಿಸಲು ಕ್ರಮಕೈಗೊಳ್ಳಲಾಗುವುದು. ಸಾಮಾನ್ಯ ದಿನಗಳಲ್ಲಿ ಬ್ಯಾರಿಕೇಡ್​ ಅಳವಡಿಸುವ ಅಗತ್ಯವಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುವುದು. ಯಶ್ಪಾಲ್​ ಸುವರ್ಣ, ಶಾಸಕರು, ಉಡುಪಿ ------------------------ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ನಗರಕ್ಕೆ ಆಗಮಿಸುವ ಮಾಹಿತಿ ಇರುವುದರಿಂದ ಕಲ್ಸಂಕದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ಬ್ಯಾರಿಕೇಡ್​ ಅಳವಡಿಸಲಾಗಿದೆ. ಟ್ರಾಫಿಕ್​ ಸಮಸ್ಯೆಯನ್ನು ಸೂಕ್ಷ$್ಮವಾಗಿ ಪರಿಶೀಲಿಸಿದ ಬಳಿಕ ಈ ನಿರ್ಧಾರಕೈಗೊಳ್ಳಲಾಗಿದ್ದು, ಈ ವ್ಯವಸ್ಥೆಯನ್ನು ಮುಂದಿನ ದಿನಗಳಲ್ಲೂ ಮುಂದುವರಿಸಲಾಗುವುದು. ಡಾ. ಕೆ. ಅರುಣ್​, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net