

ಹಿರೀಸಾವೆ: ಹೋಬಳಿಯ ಅರಕೆರೆ ಗ್ರಾಮದಲ್ಲಿ ಆಂಜನೇಯಸ್ವಾಮಿಯ ಗರುಡ ಕಂಬದ ಪ್ರತಿಷ್ಠಾಪನೆ ಕಾರ್ಯಕ್ರಮ ಶನಿವಾರ ವಿವಿಧ ಪೂಜೆಗಳು, ಹೋಮಗಳೊಂದಿಗೆ ಜರುಗಿತು.
ಬೆಳಗ್ಗೆ ಮೂಲ ಮೂರ್ತಿಗೆ ಅಭಿಷೇಕ ನಂತರ ಗಣ, ರಾಮತಾರಕ, ಆಂಜನೇಯ ಸೇರಿದಂತೆ ಇತರ ಹೋಮಗಳು ನಡೆದು, ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ ನಡೆಯಿತು. ಆಂಜನೇಯಸ್ವಾಮಿಯ ಉತ್ಸವ ಮೂರ್ತಿಯ ಅಡ್ಡಪಲ್ಲಕ್ಕಿ ಉತ್ಸವ, ಪೂರ್ಣ ಕುಂಭಗಳ ಮೆರವಣಿಗೆ ಮಂಗಳವಾದ್ಯ ಚಂಡೆ ವಾದ್ಯದೊಂದಿಗೆ ಪ್ರಾರಂಭವಾಗಿ ಗ್ರಾಮದ ಪ್ರಮುಖ ಬೀದಿಯಲ್ಲಿ ಸಾಗಿತು. ಮಧ್ಯಾಹ್ನ 1.30ಕ್ಕೆ ಗರುಡ ಕಂಬದ ಕುಂಭಾಭಿಷೇಕವನ್ನು ಭಕ್ತರು ನಡೆಸಿದರು. ನಂತರ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.
ಶುಕ್ರವಾರ ಸಂಜೆ ವಿವಿಧ ಪೂಜೆ, ಹೋಮಗಳು ನಡೆದವು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು, ಅರಕೆರೆ ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸಿದ್ದರು.