ರಾಂಪುರದಲ್ಲಿ ಶಿಲಾಮಂಟಪ ಉದ್ಘಾಟನೆ

15 SVL
Published on

ಸಾಸ್ವೆಹಳ್ಳಿ: ಹೊನ್ನಾಳಿ ತಾಲೂಕು ರಾಂಪುರ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿ ಬೃಹನ್ಮಠದ ಲಿಂ. ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿಗಳ ಕರ್ತೃ ಗದ್ದಿಗೆಯ ಶಿಲಾಮಂಟಪ ಉದ್ಘಾಟನೆ, ಅಮೃತ ಶಿಲಾಮೂರ್ತಿ ಸ್ಥಾಪನೆ, ಜೀವ ಪ್ರತಿಷ್ಠಾಪನೆ ಹಾಗೂ ಶಿಲಾಮಂಟಪ ಕಳಸಾರೋಹಣ ಕಾರ್ಯಕ್ರಮ ಶುಕ್ರವಾರ ಬ್ರಾಹ್ಮೀ ಮುಹೂರ್ತದಲ್ಲಿ ನೆರವೇರಿತು.

ಉಜ್ಜಯಿನಿ ಪೀಠದ ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹಾಗೂ ವಾರಣಾಸಿ ಕಾಶಿ ಪೀಠದ ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದರು ಸೇರಿ ನಾಡಿನ ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಪ್ರಯುಕ್ತ ಗುರುವಾರ ಮಠದ ಆವರಣದಲ್ಲಿ ಮೂಲ ಕರ್ತೃ ಗದ್ದಿಗೆಯಲ್ಲಿ ವಿಶೇಷ ಪೂಜೆ, ಅಭಿಷೇಕ, ಶಿಲಾಮಂಟಪ ಆವರಣದಲ್ಲಿ ಹೋಮ, ಹವನಗಳು ನಡೆದವು. ಸಂಜೆ ಉಭಯ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ವಿವಿಧ ಕಲಾ ತಂಡಗಳೊಂದಿಗೆ ರಾಂಪುರದ ರಾಜಬೀದಿಗಳಲ್ಲಿ ವಿಜೃಂಭಣೆಯಿಂದ ಸಾಗಿತು. ರಾತ್ರಿ ಮಠದ ಆವರಣದಲ್ಲಿ ಧರ್ಮಸಭೆ ನಡೆಯಿತು.

ಸಾನ್ನಿಧ್ಯ ವಹಿಸಿದ ಉಜ್ಜಯಿನಿ ಹಾಗೂ ಕಾಶಿ ಶ್ರೀಗಳು ಆಶೀರ್ವಚನ ನೀಡಿದರು. ಶ್ರೀಮಠದ ಸದ್ಗುರು ಶಿವಯೋಗಿ ಶಿವಕುಮಾರ ಹಾಲಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀ, ಶಿಕಾರಿಪುರ ತಾಲೂಕು ಕಡೇನಂದಿಹಳ್ಳಿ ರೇವಣಸಿದ್ದ ಶಿವಾಚಾರ್ಯ ಶ್ರೀ, ವಿಜಯನಗರ ಜಿಲ್ಲೆಯ ಬುಕ್ಕಸಾಗರದ ಕರಿಸಿದ್ದೇಶ್ವರ ವಿಶ್ವರಾಧ್ಯ ಶಿವಾಚಾರ್ಯ ಶ್ರೀ , ಚನ್ನಗಿರಿ ವಿರಕ್ತ ಮಠದ ಜಯಬಸವ ಶ್ರೀಗಳು ಉಪಸ್ಥಿತರಿದ್ದರು.

ಶಾಸಕ ಡಿ.ಜಿ.ಶಾಂತನಗೌಡ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಜಿಪಂ ಮಾಜಿ ಅಧ್ಯಕ್ಷೆ ಶೀಲಾ ಗದ್ದಿಗೇಶ್, ಮಾಜಿ ಸದಸ್ಯ ಎ.ಆರ್.ಚಂದ್ರಶೇಖರ್ ಇತರರಿದ್ದರು.

ಮೆಗ್ಗಾನ್ ಆಸ್ಪತ್ರೆಯಲ್ಲಿ ಲಿಂಗೈಕ್ಯ: ರಾಂಪುರ ಮಠದ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿಗಳು 2020ರ ಜುಲೈ 15 ರಂದು ತಮ್ಮ 55ನೇ ವಯಸ್ಸಿನಲ್ಲಿ ಕೋವಿಡ್​ನಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಲಿಂಗೈಕ್ಯರಾಗಿದ್ದರು, ಲಿಂ. ಶ್ರೀಗಳ ಪಾರ್ಥಿವ ಶರೀರವನ್ನು ಅಂದು ರಾತ್ರಿ ಶಿವಮೊಗ್ಗದಿಂದ ರಾಂಪುರಕ್ಕೆ ತಂದು ಕೋವಿಡ್ ನಿಯಮಾನುಸಾರ ಅಂದಿನ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರ ಮಾರ್ಗದರ್ಶನದಲ್ಲಿ ಅಂತ್ಯಸಂಸ್ಕಾರ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net