

ಕಿಕ್ಕೇರಿ: ಮುಜರಾಯಿ ದೇಗುಲದ ಹಣ ಅನ್ಯ ಮತೀಯ ದೇಗುಲ ಅಭಿವೃದ್ಧಿಗೆ ನೀಡುವ ಮಾಹಿತಿ ಶುದ್ಧ ಸುಳ್ಳು ಎಂದು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕೆ.ಎಂ.ನಾಗರಾಜು ತಿಳಿಸಿದರು.
ಹೋಬಳಿಯ ಸಿದ್ದಾಪುರ ಗ್ರಾಮದಲ್ಲಿ ಭಾನುವಾರ ಲೋಕಾರ್ಪಣೆಗೊಂಡ ಯಲ್ಲಮ್ಮದೇವಿ ದೇಗುಲ, ದೇವಿ ನೂತನ ವಿಗ್ರಹ ಪ್ರತಿಷ್ಠಾಪನೆ, ವಿಮಾನ ಗೋಪುರ ಕಲಶ ಸ್ಥಾಪನೆ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.
ಕುಕ್ಕೆ ಸುಬ್ರಹ್ಮಣ್ಯ, ಮಹದೇಶ್ವರಬೆಟ್ಟದಂತಹ ಯಾವುದೇ ದೇಗುಲದ ಹಣ ಆಯಾ ದೇಗುಲದ ಬ್ಯಾಂಕ್ ಖಾತೆಯಲ್ಲಿ ಇದ್ದು, ಈ ಕ್ಷೇತ್ರದ ಅಭಿವೃದ್ಧಿಗೆ ಮಾತ್ರ ಮೀಸಲು. ಬೇರೆ ಧರ್ಮದ ಅಭಿವೃದ್ಧಿಗೆ ಬಳಸಲಾಗದು. ವದಂತಿ ಹಬ್ಬಿಸುವ ಸುಳ್ಳುಗಾರರನ್ನು ನಂಬದಿರಿ ಎಂದರು.
ನಂಬುಗೆ ಪರಮಾತ್ಮನ ಮೇಲಿನ ಭಕ್ತಿಯಾಗಿದೆ. ಭಯ, ಭಕ್ತಿ ಎರಡನ್ನೂ ರೂಢಿಸಿಕೊಂಡು ಒಂದೈದು ನಿಮಿಷ ದೇಗುಲದಲ್ಲಿ ಕುಳಿತು ಏಕಾಗ್ರತೆಯಿಂದ ಭಗವಂತನ ಪ್ರಾರ್ಥಿಸಿದರೆ ಇಷ್ಟಾರ್ಥ ಖಚಿತವಾಗಿ ಸಿಗಲಿದೆ. ಬ್ರಹ್ಮಾಂಡದ ಪರಿಪೂರ್ಣ ಹತೋಟಿ ಸೃಷ್ಟಿಕರ್ತ ಪರಮಾತ್ಮನಲ್ಲಿದೆ. ನಮ್ಮ ಆತ್ಮದಲ್ಲಿ ಪರಿಶುದ್ಧತೆ ಬೇಕಿದೆ. ಸರ್ವಾಂತಯಾಮಿ ದೇವರ ಗುಡಿ ನಿರ್ಮಿಸಿ, ಮೂರ್ತಿ ಪ್ರತಿಷ್ಠಾಪಿಸಿ, ಪ್ರಾಣಪ್ರತಿಷ್ಠಾಪನೆ ಮಾಡಿದಾಗ ಸಕಾರಾತ್ಮಕ ಶಕ್ತಿ ಇಡೀ ಕ್ಷೇತ್ರಕ್ಕೆ ಲಭಿಸಲಿದೆ ಎಂದು ಹೇಳಿದರು.
ಪರಮಾತ್ಮನ ಸೃಷ್ಟಿ ಅಭೂತಪೂರ್ಣವಾಗಿದ್ದು, ಎಲ್ಲ ಜೀವಿಗಳನ್ನು ಅರ್ಥೈಸಿಕೊಳ್ಳುವ ಶಕ್ತಿ ಇದೆ. ಸೂರ್ಯನಿಗೆ ಭೂಮಿ ಮುಖ ಮಾಡಿದರೆ ಹಗಲು, ಹಿಂದೆ ಸರಿದರೆ ಕತ್ತಲು. ಇರುವುದೊಂದೇ ಮಾನವ ಜಾತಿ. ಮತ, ಜಾತಿ ಭೇದವನ್ನು ಭಗವಂತ ಒಪ್ಪಲಾರ. ರಾಜ್ಯದಲ್ಲಿ 34 ಸಾವಿರ ಮುಜರಾಯಿ ದೇಗುಲವಿದ್ದರೆ, ಖಾಸಗಿಯಾಗಿ 1.80 ಲಕ್ಷ ದೇಗುಲವಿದೆ. ಎಲ್ಲ ದೇಗುಲಗಳಿಗೆ ಅವಶ್ಯಕತೆ ಅನುಸಾರವಾಗಿ ಧನ ಸಹಾಯವಿದೆ. ಇಲ್ಲಿನ ದೇಗುಲಕ್ಕೆ ವಿಮಾನಗೋಪುರವಿದೆ. ರಾಜಗೋಪುರ ನಿರ್ಮಿಸಿದರೆ ಸರ್ಕಾರದಿಂದ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.
ಗ್ರೀಕರು, ಮುಸಲ್ಮಾನರು ದೇಶವನ್ನು ದಾಳಿ ಮಾಡಿ ಲೂಟಿ ಮಾಡಿದರು. ಫ್ರೆಂಚ್, ಗ್ರೀಕರು, ಡಚ್ಚರು, ಬ್ರಿಟಿಷರು ಬಂದು ಹೋದರು. ನಮ್ಮ ದೇಶಕ್ಕೆ ಸ್ವಾತಂತ್ರೃ ಸಿಕ್ಕಿರುವುದು ದೇವರ ಮೇಲಿನ ನಂಬುಗೆಯ ಪೂಜಾರಾಧನೆ ಶಕ್ತಿಯಿಂದ. ನಮ್ಮ ದೇಶದಲ್ಲಿ ನಡೆಯುವಷ್ಟು ಪೂಜೆ, ಪುನಸ್ಕಾರ ಮತ್ತೆಲ್ಲೂ ಕಾಣಲಾಗದು. ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳ ವಿಶ್ವಕ್ಕೆ ನಮ್ಮ ದೇಶದ ಶಕ್ತಿ, ಭಕ್ತಿ ತೋರಿಸಿದೆ ಎಂದು ಹೆಮ್ಮೆಯಿಂದ ನುಡಿದರು.
ಆರ್‌ಟಿಒ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಮಾತನಾಡಿ, ದೇಗುಲಗಳು ಒಗ್ಗಟ್ಟಿನ ಸಂಕೇತ. ಭಾವೈಕ್ಯತೆ ಸಂಕೇತವಾಗಿದೆ. ಯುವಕರಲ್ಲಿ ದ್ವೇಷಾಸೂಯೆ ದೂರಮಾಡಿ ಶಾಂತಿ, ನೆಮ್ಮದಿ ನೀಡುವ ದೇಗುಲ ನಿರ್ಮಾಣದಷ್ಟೇ ಉಳಿಸಿಕೊಂಡು ಜವಾಬ್ದಾರಿ ಎಲ್ಲರಲಿ ಇರಲಿ ಎಂದು ಕಿವಿಮಾತು ಹಾಡಿದರು.
ಹಳ್ಳಿಕಾರ್ ತಳಿಯ ಗೋವುಗಳ ಮೆರವಣಿಗೆ, ಮಹಿಳೆಯರು ಪೂರ್ಣಕುಂಭ ಮೆರವಣಿಗೆಯೊಂದಿಗೆ ಗಣ್ಯರನ್ನು ಸ್ವಾಗತಿಸಲಾಯಿತು. ವಿವಿಧ ಪೂಜೆ, ಹೋಮ-ಹವನ, ವಿಮಾನ ಗೋಪುರ ಕಲಶ ಪ್ರತಿಷ್ಠಾಪನೆಯಂತಹ ಹಲವು ಪೂಜಾ ವಿಧಿಗಳು ಜರುಗಿದವು. ಮಹಾಮಂಗಳಾರತಿ, ತೀರ್ಥ ಪ್ರಸಾದ, ಅನ್ನ ದಾಸೋಹ ಹಮ್ಮಿಕೊಳ್ಳಲಾಗಿತ್ತು.
ಮಾಜಿ ಶಾಸಕ ಬಿ.ಪ್ರಕಾಶ್, ಮನ್‌ಮುಲ್ ಮಾಜಿ ಅಧ್ಯಕ್ಷ ಚನ್ನಿಂಗೇಗೌಡ, ತಾ.ಪಂ. ಮಾಜಿ ಸದಸ್ಯ ಗೂಡೆಹೊಸಹಳ್ಳಿ ಜವರಾಯಿಗೌಡ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಎಂ.ವೀರೇಶಪ್ಪ, ಕಿಕ್ಕೇರಮ್ಮ ಎಳನೀರು ವರ್ತಕರ ಸಂಘದ ಅಧ್ಯಕ್ಷ ಭಾರತೀಪುರ ಪುಟ್ಟಣ್ಣ, ಗ್ಯಾಸ್ ಶ್ರೀ ನಾಥ್, ಮಂಜೇಗೌಡ, ಕುಮಾರ್, ಸೋಮಶೇಖರ್, ರಂಗೇಗೌಡ ಇತರರಿದ್ದರು.