

ಬಾಳೆಹೊನ್ನೂರು: ಬಿ.ಕಣಬೂರು ಗ್ರಾಪಂ ವ್ಯಾಪ್ತಿಯ ಬಾಳೆಹೊನ್ನೂರು ಪಟ್ಟಣದ ವಿವಿಧೆಡೆ 36 ಬೀದಿ ದೀಪಗಳನ್ನು ಅಳವಡಿಸಲಾಗುವುದು ಎಂದು ಗ್ರಾಪಂ ಅಧ್ಯಕ್ಷ ಸದಾಶಿವ ಆಚಾರ್ಯ ತಿಳಿಸಿದರು.
ಪಟ್ಟಣದ ಪೊಲೀಸ್ ಠಾಣೆ ಎದುರು ಬೀದಿದೀಪ ಅಳವಡಿಕೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಶಾಸಕ ರಾಜೇಗೌಡರ ಮೂಲಕ ಲೋಕೋಪಯೋಗಿ ಇಲಾಖೆಯಿಂದ ಪಟ್ಟಣದಲ್ಲಿ 36 ಅತ್ಯಾಧುನಿಕ ಬೀದಿ ದೀಪಗಳನ್ನು ಅಳವಡಿಸಲು 50 ಲಕ್ಷ ರೂ. ಅನುದಾನ ಮಂಜೂರಾಗಿದ್ದು, ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದಿಂದ ರೋಟರಿ ವೃತ್ತದವರೆಗೆ ಅವುಗಳನ್ನು ಅಳವಡಿಸಲಾಗುವುದು ಎಂದು ತಿಳಿಸಿದರು.
ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಹನೀಫ್ ಮಾತನಾಡಿ, ಪಟ್ಟಣದಲ್ಲಿ ಈ ಹಿಂದೆಯೇ ರಸ್ತೆ ವಿಸ್ತರಣೆ ಸಂದರ್ಭದಲ್ಲಿ ಹೊಸ ಮಾದರಿ ಬೀದಿ ದೀಪ ಅಳವಡಿಸಲು ಶಾಸಕ ಟಿ.ಡಿ.ರಾಜೇಗೌಡರು ಉದ್ದೇಶಿಸಿದ್ದರು. ಆದರೆ ಅದಕ್ಕೆ ಕಾಲ ಕೂಡಿ ಬಂದಿರಲಿಲ್ಲ. ಇದೀಗ ಅನುದಾನವೂ ಮಂಜೂರಾಗಿದ್ದು, ಅಗತ್ಯವಿರುವ ಕಡೆ ಹೊಸ ಬೀದಿ ದೀಪಗಳನ್ನು ಅಳವಡಿಸಲಾಗುವುದು. ಇದು ಪಟ್ಟಣಕ್ಕೆ ಇನ್ನಷ್ಟು ಕಳೆ ನೀಡಲಿದೆ ಎಂದರು.
ಗ್ರಾಪಂ ಸದಸ್ಯರಾದ ಬಿ.ಕೆ.ಮಧುಸೂದನ್, ರವಿಚಂದ್ರ, ಬಿ.ಸಿ.ಸಂತೋಷ್‌ಕುಮಾರ್, ಮಹಮ್ಮದ್ ಜುಹೇಬ್, ಶಿವಪ್ಪ, ಪರ್ವಿನ್ ಇಮ್ತಿಯಾಜ್, ಗ್ರಾಪಂ ಮಾಜಿ ಅಧ್ಯಕ್ಷ ಜಾನ್ ಡಿಸೋಜಾ, ಗುತ್ತಿಗೆದಾರ ಶ್ರೀಕಂಠ, ಬಶೀರ್, ಎಚ್.ಎಂ.ಸಲೀಮ್, ಅಬೂಬಕರ್ ಸಿದ್ದಿಕ್, ಇಲಿಯಾಸ್ ಮತ್ತಿತರರು ಹಾಜರಿದ್ದರು.