ಕಾಂಗ್ರೆಸ್ ಬಲಿಷ್ಠಗೊಳಿಸುವ ಗುರಿ : ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿಕೆ

congress
Published on

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ಬಿಜೆಪಿಯದ್ದು ಹಿಪೋಕ್ರಸಿ ರಾಜಕಾರಣವಾಗಿದ್ದು, ಆ ಪಕ್ಷವನ್ನು ಅಧಿಕಾರದಿಂದ ದೂರವಿಟ್ಟು, ಕಾಂಗ್ರೆಸ್ ಪಕ್ಷ ಬಲಿಷ್ಠಗೊಳಿಸುವುದೇ ನಮ್ಮ ಗುರಿಯಾಗಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.

ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ನೂತನ ಅಧ್ಯಕ್ಷ ಪದಗ್ರಹಣ ಹಾಗೂ ಕಿಸಾನ್ ಘಟಕ, ಎನ್.ಎಸ್.ಯು.ಐ.ಘಟಕದ ಪದಗ್ರಹಣ ಕಾರ್ಯಕ್ರಮ ಬಿ.ಸಿ.ರೋಡ್‌ನಲ್ಲಿ ಬುಧವಾರ ನಡೆದಿದ್ದು, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಂಟ್ವಾಳ ಪುರಸಭೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಎಸ್.ಡಿ.ಪಿ.ಐ. ಜತೆ ಹೊಂದಾಣಿಕೆ ಮಾಡಿಕೊಂಡಿದ್ದು, ಕಾಂಗ್ರೆಸ್ ಡಿಎನ್‌ಎ ಬಗ್ಗೆ ಮಾತನಾಡುವವರಿಗೆ ಹಿಂದೆ ಇದೇ ಪುರಸಭೆಯಲ್ಲಿ ಬಿಜೆಪಿಯ ದಿನೇಶ್ ಭಂಡಾರಿ ಅಧ್ಯಕ್ಷ ಇಕ್ಬಾಲ್ ಉಪಾಧ್ಯಕ್ಷರಾಗಿ ಅಧಿಕಾರ ಹೊಂದಾಣಿಕೆ ಮಾಡಿಕೊಂಡದ್ದು ನೆನಪಾಗುವುದಿಲ್ಲವೇ ಎಂದು ಪ್ರಶ್ನಿಸಿದರು.

ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಕಾಂಗ್ರೆಸ್‌ನ ಎಲ್ಲ ಮುಂಚೂಣಿಯ ಘಟಕಗಳು ಹೊಂದಾಣಿಕೆಯಿಂದ ಒಗ್ಗಟ್ಟಾಗಿ ಕೆಲಸ ಮಾಡಿದಾಗ ಬ್ಲಾಕ್ ಕಾಂಗ್ರೆಸ್ ಬಲಗೊಳ್ಳಲು ಸಾಧ್ಯ ತಿಳಿಸಿದರು.

ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಪದ್ಮರಾಜ ಆರ್.ಪೂಜಾರಿ ಮಾತನಾಡಿ, ಕಡಿಮೆ ಮತ ಗಳಿಸಿದ ಬೂತ್‌ಗಳಲ್ಲಿ ಪಕ್ಷವನ್ನು ಬಲಿಷ್ಠಗೊಳಿಸಬೇಕು ಎಂದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ತನಗೆ ಉಳಿಗಾಲವಿಲ್ಲ ಎಂಬ ಹೆದರಿಕೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಬಿಜೆಪಿ-ಜೆಡಿಎಸ್ ಆಪಾದನೆ ಮಾಡುತ್ತಿದೆ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎ.ಬಾವಾ ಶುಭ ಹಾರೈಸಿದರು. ಪುರಸಭೆ ಅಧ್ಯಕ್ಷ ಬಿ.ವಾಸು ಪೂಜಾರಿ, ಬುಡಾ ಅಧ್ಯಕ್ಷ ಬೇಬಿ ಕುಂದರ್, ಪಕ್ಷ ಪ್ರಮುಖರಾದ ಚಂದ್ರಪ್ರಕಾಶ ಶೆಟ್ಟಿ ತುಂಬೆ, ಪಿಯೂಸ್ ಎಲ್.ರೋಡ್ರಿಗಸ್, ಎಂ.ಎಸ್.ಮಹಮ್ಮದ್, ಬಿ.ಎಚ್.ಖಾದರ್, ಪದ್ಮಶೇಖರ ಜೈನ್, ಬಿ.ಎಂ.ಅಬ್ಬಾಸ್ ಆಲಿ, ಪದ್ಮನಾಭ ರೈ, ಮೋಹನ ಗೌಡ ಕಲ್ಮಂಜ, ಜಯಂತಿ ಆರ್.ಪೂಜಾರಿ, ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡು, ಸುಹಾನ್ ಆಳ್ವ, ಚಿತ್ತರಂಜನ್ ಶೆಟ್ಟಿ ಬೊಂಡಾಲ, ವಿಲ್ಮಾ ಮೊರಾಸ್, ಸುರೇಶ್ ಜೋರಾ, ಸುದೀಪ್ ಕುಮಾರ್ ಶೆಟ್ಟಿ, ಇಬ್ರಾಹಿಂ ನವಾಝ್, ಸುದರ್ಶನ ಜೈನ್ ಉಪಸ್ಥಿತರಿದ್ದರು.

ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷರಾಗಿ ಚಂದ್ರಶೇಖರ ಭಂಡಾರಿ, ಬಂಟ್ವಾಳ ಬ್ಲಾಕ್ ಅಧ್ಯಕ್ಷರಾಗಿ ಬಾಲಕೃಷ್ಣ ಅಂಚನ್ ಎನ್.ಎಸ್.ಯು.ಐ. ಅಧ್ಯಕ್ಷ ಮಹಮ್ಮದ್ ಸಫ್ವಾನ್ ಅವರ ಪದಗ್ರಹಣ ನಡೆಯಿತು. ಕಿಸಾನ್ ಘಟಕದ ಸುಧಾಕರ ಶೆಣೈ ನೇತೃತ್ವದ ತಂಡ, ಕಾರ್ಮಿಕ ಘಟಕಾಧ್ಯಕ್ಷರಾಗಿ ಚಂದ್ರಶೇಖರ ಆಚಾರ್ಯ ಮತ್ತು ತಂಡ ಅಧಿಕಾರ ಸ್ವೀಕರಿಸಿತು. ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರ್ವಹಿಸಿದರು. ನಿರ್ಗಮನ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net