

ಶನಿವಾರಸಂತೆ: ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಕುಶಾಲನಗರ ಡಿವೈಎಸ್‌ಪಿ ಗಂಗಾಧರಪ್ಪ ಅವರ ಅಧ್ಯಕ್ಷತೆಯಲ್ಲಿ ಪಟ್ಟಣದ ಆರ್.ವಿ. ಕಲ್ಯಾಣ ಮಂಟಪದಲ್ಲಿ ಬುಧವಾರ ಶನಿವಾರಸಂತೆ ವ್ಯಾಪ್ತಿಯ ಗೌರಿ-ಗಣೇಶ ನಾನಾ ಸೇವಾ ಸಮಿತಿಯ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಡಿವೈಎಸ್‌ಪಿ ಗಂಗಾಧರಪ್ಪ, ಗೌರಿ, ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ ನಂತರ ಸೇವಾ ಸಮಿತಿ ಪೊಲೀಸ್ ಇಲಾಖೆ ಕಾನೂನು ನಿಯಮವನ್ನು ಪಾಲಿಸಬೇಕು. ಡಿಜೆ, ಧ್ವನಿವರ್ಧಕ ಬಳಕೆಯನ್ನು ಆದಷ್ಟು ಕಡಿಮೆ ಮಾಡಬೇಕು. ಫ್ಲೆಕ್ಸ್ ಅಳವಡಿಸುವಾಗ ಬೇರೆಯವರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ವಿದ್ಯುತ್ ಅಳವಡಿಕೆ ಸಂದರ್ಭ ಸಂಬಂಧಪಟ್ಟ ವಿದ್ಯುತ್ ಇಲಾಖೆಯ ಪರವಾನಿಗೆ ಪಡೆದುಕೊಳ್ಳಬೇಕು. ಯಾವುದೇ ಗಲಭೆಯಾಗದಂತೆ ಸೇವಾ ಸಮಿತಿಯವರು ನೋಡಿಕೊಳ್ಳಬೇಕು ಎಂದರು.
ರಾತ್ರಿ 10 ಗಂಟೆಯ ನಂತರ ಎಲ್ಲೂ ಶಬ್ಧ ಮಾಲಿನ್ಯವಾಗಬಾರದು. ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಕೆರೆಗಳಲ್ಲಿ ನೀರು ಸಂಗ್ರಹ ಹೆಚ್ಚಾಗಿರುತ್ತದೆ. ಗೌರಿ-ಗಣೇಶ ಮೂರ್ತಿ ವಿಸರ್ಜನೆ ಸಂದರ್ಭ ಸೂಕ್ತ ಪರಿಣಿತರನ್ನು ಮಾತ್ರ ಕೆರೆಗೆ ಇಳಿಸಬೇಕು. ಕೆರೆಯಲ್ಲಿ ನೀರು ಮಲೀನವಾಗದಂತೆ ಎಚ್ಚರ ವಹಿಸಬೇಕು. ಗಣೇಶ ವಿಸರ್ಜನೆಯವರೆಗೂ ಪ್ರತಿನಿತ್ಯ ಸೇವಾ ಸಮಿತಿಯ ಸ್ವಯಂ ಸೇವಕರು ಪ್ರತಿಷ್ಠಾಪನೆ ಮಾಡಿರುವ ಸ್ಥಳದಲ್ಲಿರಬೇಕು. ಚಿಕ್ಕಪುಟ್ಟ ಜಗಳ, ಗಲಾಟೆ ಸೇರಿದಂತೆ ಏನೇ ಅಹಿತಕರ ಘಟನೆಯಾದರೂ ಆಯೋಜಕರೆ ಜವಾಬ್ದಾರಿತರಾಗಿರುತ್ತಾರೆ ಎಂದು ಎಚ್ಚರಿಸಿದರು.
ಸಭೆಯಲ್ಲಿ ಶನಿವಾರಸಂತೆ ವೃತ್ತ ನಿರೀಕ್ಷಕ ಪ್ರೀತಂ ಡಿ.ಶ್ರೇಯಕರ್, ಠಾಣಾಧಿಕಾರಿ ಗೋವಿಂದರಾಜು ಹಾಜರಿದ್ದರು.