ಹೆದ್ದಾರಿಗಳಲ್ಲಿ ಸೈನ್‌ಬೋರ್ಡ್ ಆದ್ಯತೆ ಮೇಲೆ ಅಳವಡಿಸಿ

6adarshkdga7
Published on

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ರಾಷ್ಟ್ರೀಯ, ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಆಗಾಗ ಅಪಘಾತಗಳು ಸಂಭವಿಸುತ್ತಿದ್ದು, ಅಪಘಾತಗಳನ್ನು ತಡೆಯಲು ಅಗತ್ಯ ಇರುವ ಕಡೆಗಳಲ್ಲಿ ಸೈನ್‌ಬೋರ್ಡ್(ಸೂಚನಾ ಫಲಕ) ಅಳವಡಿಸುವಂತೆ ಸಂಬಂಧಪಟ್ಟ ವಿಭಾಗದ ಎಂಜಿನಿಯರ್‌ಗಳಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚಿಸಿದರು.


ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಕೊಡಗು ಜಿಲ್ಲೆಗೆ ರಾಜ್ಯ, ಅಂತರ ರಾಜ್ಯಗಳಿಂದ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ. ಸ್ಥಳೀಯರು ಸೇರಿದಂತೆ ಯಾರಿಗೂ ಯಾವುದೇ ರೀತಿ ತೊಂದರೆಯಾಗದಂತೆ ಗಮನಹರಿಸುವುದು ಅತ್ಯಗತ್ಯ. ಪ್ರತಿಯೊಬ್ಬರ ಜೀವ ಮುಖ್ಯವಾಗಿದ್ದು, ಆ ನಿಟ್ಟಿನಲ್ಲಿ ಅಪಘಾತ ತಡೆಯುವಲ್ಲಿ ಅಗತ್ಯ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ತಾಕೀತು ಮಾಡಿದರು.


ರಾಷ್ಟ್ರೀಯ, ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಸೈನ್ ಬೋರ್ಡ್ ಅಳವಡಿಸುವ ಸಂಬಂಧ ಪೊಲೀಸ್ ಇಲಾಖೆಯಿಂದ ಸ್ಥಳದ ಮಾಹಿತಿ ಪಟ್ಟಿ ಪಡೆದು ಕೂಡಲೇ ಸೈನ್‌ಬೋರ್ಡ್‌ನ್ನು ಆದ್ಯತೆ ಮೇಲೆ ಅಳವಡಿಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.


ಈಗಾಗಲೇ ಜಿಲ್ಲೆಯಲ್ಲಿ ಮಳೆ ಬಿರುಸು ಪಡೆದಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಮಳೆ ಜತೆಗೆ ಮಂಜು ಆವರಿಸುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ಸೈನ್‌ಬೋರ್ಡ್ ಅಳವಡಿಸುವುದು, ಜೀಬ್ರಾ ಕ್ರಾಸ್ ಬರೆಸುವುದು, ರೈಲಿಂಗ್ಸ್ ನಿರ್ಮಾಣ ಅತ್ಯವಶ್ಯಕವಾಗಿದ್ದು, ಈ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳುವಂತೆ ಸಂಬಂಧಪಟ್ಟ ಎಂಜಿನಿಯರ್‌ಗಳಿಗೆ ವೆಂಕಟ್ ರಾಜಾ ನಿರ್ದೇಶನ ನೀಡಿದರು.


ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾತನಾಡಿ, ಕುಶಾಲನಗರದಿಂದ ಸಂಪಾಜೆವರೆಗೆ ಅಷ್ಟಾಗಿ ಸೂಚನಾ ಫಲಕಗಳು ಇಲ್ಲ. ಆದ್ದರಿಂದ ಅಗತ್ಯವಿರುವ ಕಡೆಗಳಲ್ಲಿ ಸೂಚನಾ ಫಲಕ ಅಳವಡಿಸಬೇಕು. ರಾಷ್ಟ್ರೀಯ, ರಾಜ್ಯ ಹೆದ್ದಾರಿ ಸೇರಿದಂತೆ ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ಗಿಡಗಂಟೆಗಳನ್ನು ಕಡಿದು ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡುವಂತೆ ಸಲಹೆ ಮಾಡಿದರು.


ಅಪಘಾತ ವಲಯಗಳನ್ನು ಗುರುತಿಸಿ ಸೈನ್‌ಬೋರ್ಡ್ ಇಲ್ಲದ ಕಡೆ ಸೈನ್‌ಬೋರ್ಡ್ ಅಳವಡಿಸಬೇಕು. ಶಾಲಾ-ಕಾಲೇಜು ವ್ಯಾಪ್ತಿಯಲ್ಲಿ ಸಂಚಾರಿ ಮಾರ್ಗದ ವಿವರ ಮಾಹಿತಿ ಫಲಕ ಅಳವಡಿಸುವುದು. ಸಾರ್ವಜನಿಕ ಹಿತದೃಷ್ಟಿಯಿಂದ ಆದ್ಯತೆ ಮೇಲೆ ಸಂಚಾರಕ್ಕೆ ಸೈನ್ ಬೋರ್ಡ್ ಅಳವಡಿಸುವುದು, ಜೀಬ್ರಾ ಕ್ರಾಸ್ ಬರೆಸುವುದು, ರೈಲಿಂಗ್ಸ್ ಮತ್ತಿತರ ಕೆಲಸಗಳು ಆಗಬೇಕಿದೆ ಎಂದು ಹೇಳಿದರು.


ಲೋಕೋಪಯೋಗಿ ಇಲಾಖೆಯ ಇಇ ಸಿದ್ದೇಗೌಡ, ಜಿ.ಪಂ. ಇಇ ಸುರೇಶ್ ಕುಮಾರ್, ಹೆದ್ದಾರಿ ವಿಭಾಗದ ಸಹಾಯಕ ಎಂಜಿನಿಯರ್ ಹನುಮಂತ ಅವರು ತಮ್ಮ ವ್ಯಾಪ್ತಿಯಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ಕೂಡಲೇ ಕ್ರಮವಹಿಸಲಾಗುವುದು ಎಂದು ತಿಳಿಸಿದರು.


ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗದ ಮುಖ್ಯಸ್ಥ ಜಯಕರ ಶೆಟ್ಟಿ ಮಾತನಾಡಿ, ರಸ್ತೆ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಬಸ್‌ಗಳಿಗೆ ವೇಗದ ಮಿತಿ ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದರು.


ಪ್ರಾದೇಶಿಕ ಸಾರಿಗೆ ಅಧಿಕಾರಿ ಮಧುರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್, ಕೆಎಸ್‌ಆರ್‌ಟಿಸಿ ಮಡಿಕೇರಿ ಘಟಕದ ವ್ಯವಸ್ಥಾಪಕರಾದ ಗೀತಾ, ಕಾರ್ಮಿಕ ಇಲಾಖಾ ಅಧಿಕಾರಿ ಹರ್ಷವರ್ಧನ್, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ನಯನ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net