

ವಿಜಯವಾಣಿ ಸುದ್ದಿಜಾಲ ಹೆಬ್ರಿ
ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾ.ಪಂ ವತಿಯಿಂದ ಮಹಿಳಾ ಮತ್ತು ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.
ಗ್ರಾಮ ಪಂಚಾಯಿತಿ ಆಡಳಿತಗಾರರ ಮುಂದೆ ವಿದ್ಯಾರ್ಥಿಗಳು ಹಲವು ಪ್ರಮುಖ ಬೇಡಿಕೆಗಳನ್ನಿಟ್ಟಿದ್ದು, ಉಪ್ಪಳ ಶಾಲೆ ಮುಂಭಾಗದ ರಸ್ತೆಗೆ ಹಂಪ್ ಅಳವಡಿಸಿ ಸೂಚನಾಫಲಕ ಅಳವಡಿಸಬೇಕು. ಶಾಲೆಯ ಗ್ರಂಥಾಲಯ ಮತ್ತು ಪ್ರಯೋಗಾಲಯಕ್ಕೆ ಸಾಮಗ್ರಿ ಅವಶ್ಯಕತೆಯಿದ್ದು, ತೆರೆದ ಬಾವಿ, ಮಾರ್ಮಕ್ಕಿ ಸೇತುವೆ ಬಳಿ ಕಾಲುಸಂಕ ನಿರ್ಮಿಸುವಂತೆ ಒತ್ತಾಯಿಸಿದರು.
ಮುದ್ರಾಡಿ ಶಾಲೆಗೆ ಕ್ರೀಡಾ ಸಮವಸ್ತ್ರ ಮತ್ತು ಕ್ರೀಡೋಪಕರಣ ಅಗತ್ಯವಿದ್ದು, ಮಳೆನೀರು ಕೊಯ್ಲುಗೆ ಸಮರ್ಪಕ ವ್ಯವಸ್ಥೆ ಕಲ್ಪಿಸಿಕೊಡಬೇಕು. ತುಂಡುಗುಡ್ಡೆ ಶಾಲೆಯ ಬಟ್ಟಲು ಸ್ಟ್ಯಾಂಡ್ ಹಾಗೂ ಕೈ ತೊಳೆಯುವ ಘಟಕದ ನೆಲ ದುರಸ್ತಿಗೊಳಿಸಬೇಕು. ಕೈತೋಟದ ಪೈಪ್‌ಲೈನ್ ದುರಸ್ತಿ, ಕ್ರೀಡಾ ಸಾಮಗ್ರಿ ಪೂರೈಕೆಯಾಗಬೇಕಿದ್ದು, ಶಾಲೆಯ ಮೇಲ್ಚಾವಣಿ ದುರಸ್ತಿ ಮತ್ತು ವೈರಿಂಗ್ ಅತಿ ಶೀಘ್ರವೇ ಮಾಡಿಕೊಡುವಂತೆ ವಿದ್ಯಾರ್ಥಿಗಳು ಅಧಿಕಾರಿಗಳನ್ನು ಆಗ್ರಹಿಸಿದರು.
ನೋಡಲ್ ಅಧಿಕಾರಿಯಾಗಿ ಶಿಕ್ಷಣ ಸಂಯೋಜಕ ಪ್ರಕಾಶ್ ಕೆ, ಗ್ರಾಪಂ ಉಪಾಧ್ಯಕ್ಷೆ ರಮ್ಯಾಕಾಂತಿ, ಸದಸ್ಯರಾದ ಮಂಜುನಾಥ ಹೆಗ್ಡೆ, ಎಂ.ಗಣಪತಿ, ಶುಭದರ ಶೆಟ್ಟಿ, ಸಂತೋಷ ಕುಮಾರ್ ಶೆಟ್ಟಿ, ಜಗದೀಶ್ ಪೂಜಾರಿ, ಸನತ್ ಕುಮಾರ್, ಪಲ್ಲವಿ ಎಸ್.ರಾವ್, ವನಿತಾ ಎನ್.ರಾವ್, ನಾಗಶ್ರೀ, ರತ್ನಾ ಪೂಜಾರಿ, ಜಯಂತಿ, ಶಾಲಾ ಮುಖ್ಯಶಿಕ್ಷಕರು, ಶಿಕ್ಷಕರು, ಮಕ್ಕಳು, ಗ್ರಾಪಂ ಸಿಬ್ಬಂದಿ ಉಪಸ್ಥಿತರಿದ್ದರು. ಅಮೃತಾ ಕುಲಾಲ್ ಸ್ವಾಗತಿಸಿದರು. ಶೋಭಾವತಿ ಶೆಟ್ಟಿ ವಂದಿಸಿದರು. ಪದ್ಮನಾಭ ಆರ್.ಕುಲಾಲ್ ನಿರೂಪಿಸಿದರು.
ನೆಲ್ಲಿಕಟ್ಟೆ ಶಾಲೆಗೆ ಸ್ಮಾರ್ಟ್ ಕ್ಲಾಸ್ ಅವಶ್ಯಕತೆಯಿದ್ದು, ಜತೆಗೆ ಸೋಲಾರ್ ಸಿಸ್ಟಮ್ ಅಳವಡಿಸಬೇಕು. ಮೇಲ್ಮಠ ಶಾಲೆಗೆ ಡೆಸ್ಕ್ ಮತ್ತು ಬೆಂಚ್ ವ್ಯವಸ್ಥೆ, ತುರ್ತಾಗಿ ಆವರಣಗೋಡೆ ಅಗತ್ಯವಿದೆ. ಕೊಂಕಣಾರಬೆಟ್ಟು ಶಾಲೆಗೆ ಸಂಪೂರ್ಣ ಆವರಣ ಗೋಡೆ ರಚನೆ, ಟೈಲ್ಸ್ ಅಳವಡಿಕೆ, ಕಂಪ್ಯೂಟರ್ ಲ್ಯಾಬ್ ಮತ್ತು ಪ್ರಾಜೆಕ್ಟರ್ ಒದಗಿಸುವಿಕೆ, ಶಾಲೆಗೆ ಬಾಲವನ ನಿರ್ಮಾಣ ಸಹಿತ ಹಲವು ಅಗತ್ಯತೆಗಳ ಪೂರೈಸುವಂತೆ ವಿದ್ಯಾರ್ಥಿಗಳು ಮನವಿ ಮಾಡಿದರು.
ಫಲಾನುಭವಿಗಳಿಗೆ ವೈದ್ಯಕೀಯ ಮತ್ತು ಶೈಕ್ಷಣಿಕ ಸಹಾಯಧನ ಚೆಕ್, ವಿಕಲಚೇತನ ಫಲಾನುಭವಿಗಳಿಗೆ ಸಾಧನ ಸಲಕರಣೆ ವಿತರಿಸಲಾಯಿತು.