

ದೇವದುರ್ಗ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಪ್ರತಿಮ ದೇಶಭಕ್ತನಾಗಿದ್ದು, ಜೀವನವಿಡಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಪ್ರಾಣ ತ್ಯಾಗ ಮಾಡಿದ್ದಾರೆ ಎಂದು ಪುರಸಭೆ ಮುಖ್ಯಾಧಿಕಾರಿ ಕೆ.ಹಂಪಯ್ಯ ಹೇಳಿದರು.
ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಭಾನುವಾರ ಆಯೋಜಿಸಿದ್ದ ಸಂಗೊಳ್ಳಿ ರಾಯಣ್ಣ ಹುತಾತ್ಮ ದಿನಾಚರಣೆಯಲ್ಲಿ ಮಾತನಾಡಿದರು. ದೇಶದ ರಕ್ಷಣೆಗಾಗಿ ಕಿತ್ತೂರು ರಾಣಿ ಚನ್ನಮ್ಮನ ಮಾರ್ಗದರ್ಶನದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ್ದಾರೆ. ಅವರ ಹೋರಾಟ ಯುವಜನತೆಗೆ ಪ್ರೇರಣೆಯಾಗಿದೆ.
ಯುವಕರು ದೇಶಭಕ್ತರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ನಾಡಿಗಾಗಿ ಕೆಲಸ ಮಾಡಬೇಕು. ಸಾಮಾಜಿಕ ಜಾಲತಾಣ, ದುಶ್ಚಟಗಳಿಗೆ ದಾಸರಾಗದೆ ಸಮಾಜದ ಪ್ರಜ್ಞಾವಂತ ನಾಗರಿಕರಾಗಿ ದುಡಿಯಬೇಕು. ದೇಶದ ಭವಿಷ್ಯ ಮುಂದಿನ ಪೀಳಿಗೆ ಮೇಲಿದ್ದು ಸಂಗೊಳ್ಳಿ ರಾಯಣ್ಣ, ಸುಭಾಶ್ಚಂದ್ರ ಬೋಸ್ ಸೇರಿ ಮಹನೀಯರ ಆದರ್ಶಗಳನ್ನು ಪಾಲಿಸಬೇಕು ಎಂದರು.
ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಕಂದಾಯ ನಿರೀಕ್ಷಕ ಭೀಮನಗೌಡ ಪಾಟೀಲ್, ಕರ್ನಾಟಕ ಪ್ರದೇಶ ಕುರುಬರ ಸಂಘದ ತಾಲೂಕು ಅಧ್ಯಕ್ಷ ನಾಗರಾಜ ಖಾನಾಪುರ, ತಾಲೂಕು ಕಾರ್ಯದರ್ಶಿ ನರಸಣ್ಣ ನಿಲವಂಜಿ, ಎಸ್.ಬಿ.ಪೂಜಾರಿ ಇತರರಿದ್ದರು.