

ಚಿತ್ರದುರ್ಗ: ನಿಜಶರಣ ಅಂಬಿಗರ ಚೌಡಯ್ಯ ತತ್ವಾದರ್ಶ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಸಮಾಜ ನಿರ್ಮಿಸಲು ಮುಂದಾಗೋಣ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಸಲಹೆ ನೀಡಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗಂಗಾಮತಸ್ಥ ಬೆಸ್ತರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಅಂಬಿಗರ ಚೌಡಯ್ಯ ಜಯಂತಿಯಲ್ಲಿ ಮಾತನಾಡಿದರು.
ನೇರ, ನಿಷ್ಠುರವಾದಿಯಾದ ಚೌಡಯ್ಯ ವಚನಗಳ ಮೂಲಕ ಸಮಾಜದ ಅಂಕು-ಡೊಂಕು ತಿದ್ದುವ ಕಾಯಕದಲ್ಲಿ ನಿರತರಾದ ಮಹನೀಯರಲ್ಲಿ ಮುಂಚೂಣಿ ಶರಣರು. 12ನೇ ಶತಮಾನದ ಕಲ್ಯಾಣ ಕ್ರಾಂತಿಯಲ್ಲಿ ಅನೇಕ ಶರಣರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅದರಲ್ಲಿ ಇವರನ್ನೂ ಮರೆಯಲಾಗದು ಎಂದರು.
ಮನುಷ್ಯನಿಗೆ ಸ್ವಾರ್ಥಪರ ಆಸೆ ಹೆಚ್ಚಿದ್ದು ಶಿವನೆಡೆಗೆ ಭಕ್ತಿ ತೋರುವವರು ಕಡಿಮೆ ಎಂಬುದಾಗಿ ವಚನಗಳ ಮೂಲಕ ಕಳವಳ ವ್ಯಕ್ತಪಡಿಸಿ ಜಾಗೃತಿ ಮೂಡಿಸಿದ್ದಾರೆ. ಜಾತೀಯತೆ ವಿರುದ್ಧ ಪ್ರಬಲವಾಗಿ ಹೋರಾಡಿ ಸಮ ಸಮಾಜ ನಿರ್ಮಿಸಲು ಕೂಡ ಪ್ರಯತ್ನಿಸಿದ್ದ ಶ್ರೇಷ್ಠ ವಚನಕಾರ ಎಂದು ಬಣ್ಣಿಸಿದರು.
ಬಾಲಕರ ಸರ್ಕಾರಿ ಪಪೂ ಕಾಲೇಜಿನ ಉಪನ್ಯಾಸಕ ಡಾ.ಬಿ.ಎಂ.ಗುರುನಾಥ್ ಮಾತನಾಡಿ, ಸಮಾಜದ ಕುರಿತು ಉತ್ತಮವಾಗಿ ಅರ್ಥೈಸಿಕೊಂಡಿದ್ದ ಚೌಡಯ್ಯ ಅವರು ಯಾವ ಸಂದರ್ಭದಲ್ಲಿ ಹೇಗೆ ವರ್ತಿಸಬೇಕೆಂದು ತಮ್ಮ ವಚನಗಳಲ್ಲಿ ತಿಳಿಸಿಕೊಟ್ಟಿದ್ದಾರೆ. ಅಸಮಾನತೆ ಹೋಗಲಾಡಿಸಲು ಧಾರ್ಮಿಕ ಕ್ಷೇತ್ರದಲ್ಲಿ ಸೈದ್ಧಾಂತಿಕ ನಿಲುವಿನೊಂದಿಗೆ ಕೆಲಸ ಮಾಡಿದ್ದಾರೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ, ಗಂಗಾಮತಸ್ಥ ಬೆಸ್ತರ ಸಂಘದ ಜಿಲ್ಲಾಧ್ಯಕ್ಷ ಎಚ್.ಡಿ.ರಂಗಯ್ಯ, ಗೌರವಾಧ್ಯಕ್ಷ ತ್ಯಾಗರಾಜ್, ಕಾರ್ಯದರ್ಶಿ ಪಿ.ಶ್ರೀನಿವಾಸ್, ಉಪಾಧ್ಯಕ್ಷ ಕೃಷ್ಣಮೂರ್ತಿ, ಮುಖಂಡರಾದ ದೊರೆಸ್ವಾಮಿ, ರಾಮಸ್ವಾಮಿ, ರಂಗಣ್ಣ, ಜಯಣ್ಣ, ನಾಗರಾಜ್, ಕೆ.ಶಶಿಕಿರಣ್, ಸಿದ್ದಣ್ಣನವರ್, ಕುಮಾರಣ್ಣ, ಹನುಮಂತಪ್ಪ, ಮಹೇಶ್, ರಾಜು ಇತರರಿದ್ದರು.