

ತುಮಕೂರು: ವಿದ್ಯುತ್ ರಹಿತ ಫ್ರಿಡ್ಜ್, ಉಡಾವಣೆಗೆ ಸಿದ್ಧಗೊಂಡ ಉಪಗ್ರಹಗಳು, ದೂರದರ್ಶನ ಪ್ರಸಾರ, ಸೌರಶಕ್ತಿಯ ಸಮರ್ಪಕ ಬಳಕೆ, ವಿದ್ಯುತ್ ಕಳ್ಳತನ ತಡೆಯಲು ಮಾರ್ಗ ಸೇರಿ ತರಹವಾರಿ 450ಕ್ಕೂ ಹೆಚ್ಚು ಪ್ರಯೋಗಗಳು ನಗರದ ಹಳೆಯ ಡಯಟ್ ಆವರಣದಲ್ಲಿ ಜಿಲ್ಲಾಡಳಿತ ಆಯೋಜಿಸಿರುವ ಎರಡು ದಿನಗಳ ಜಿಲ್ಲಾಮಟ್ಟದ ಇನ್ಸ್‌ಫೈರ್ ಅವಾರ್ಡ್ ಹಾಗೂ ವಿಜ್ಞಾನ ಮತ್ತು ವಸ್ತುಪ್ರದರ್ಶನದಲ್ಲಿ ಗಮನ ಸೆಳೆದವು.
ಮಕ್ಕಳ ಕಲ್ಪನೆಯಲ್ಲಿ ಮೂಡಿಬಂದ ವಿನ್ಯಾಸಗಳನ್ನು ಪ್ರದರ್ಶನಕ್ಕೆ ಇಡಲಾಗಿದ್ದು ಪುಟಾಣಿ ವಿಜ್ಞಾನಿಗಳ ಪ್ರತಿಭೆ ಪ್ರದರ್ಶನವಾಯಿತು.
ಗುಬ್ಬಿ ತಾಲೂಕು ನಂದಿಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿಯ ವಿದ್ಯುತ್ ಉಳಿಸುವುದು ಹೇಗೆ?, ತುರುವೇಕೆರೆ ಲೋಕಮ್ಮನಹಳ್ಳಿ ಶಾಲೆಯ ವಿದ್ಯುತ್ ಕಳ್ಳತನ ಪತ್ತೆ ಮಾಡುವ ಸಾಧನ, ಕೊರಟಗೆರೆ ತಾಲೂಕಿನ ತಿಮ್ಮಸಂದ್ರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಶಕ್ತಿಯ ಬಳಕೆ., ತುಮಕೂರು ತಾಲೂಕಿನ ಕೋಡಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ವಿದ್ಯಾರ್ಥಿಗಳಿಂದ ಸ್ವಯಂ ಚಾಲಿತ ಬೀದಿದೀಪ ಗಮನಸೆಳೆದವು. ತುರುವೇಕೆರೆ ತಾಲೂಕಿನ ಮುದಿಗೆರೆ ಶಾಲೆಯ ವಿದ್ಯಾರ್ಥಿಯಿಂದ ಬೆಳಕಿನ ಸರಳ ರೇಖಾ ಪ್ರಸರಣ, ತಿಪಟೂರು ಸರ್ಕಾರಿ ಪಾಠಶಾಲೆ ವಿದ್ಯಾರ್ಥಿಯಿಂದ ಕಳೆ ಕಟಾವು ಯಂತ್ರ, ಕುಣಿಗಲ್ ಸಿದ್ದಾರ್ಥ ಅನುದಾನಿತ ಪ್ರೌಢಶಾಲಾ ವಿದ್ಯಾರ್ಥಿಯಿಂದ ಸೋಲಾರ್ ಬ್ಲೈಂಡ್ ವಾಕರ್ ನೋಡುವುದೇ ಚಂದವಾಗಿದೆ.
ಪ್ರದರ್ಶನದಲ್ಲಿ ವಿದ್ಯಾರ್ಥಿನಿಯರ ಸಂಖ್ಯೆಯೇ ಹೆಚ್ಚಿದ್ದು, ರೈತ ಸಮುದಾಯಕ್ಕೆ ಉಪಯೋಗುವ ಹಾಗೂ ಪರಿಸರ ಸ್ನೇಹಿ ಮಾದರಿಗೆ ಆದ್ಯತೆ ನೀಡಲಾಗಿದೆ. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾಗುವ ಒಟ್ಟು 35 ಪ್ರಾತ್ಯಕ್ಷಿಕೆಗಳು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪ್ರದರ್ಶನಗೊಳ್ಳಲಿವೆ.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಿಡಿಪಿಐ ಎಂ.ಆರ್.ಕಾಮಾಕ್ಷಿ, ಶಿಕ್ಷಕರು ಮಕ್ಕಳಲ್ಲಿನ ಸೃಜನಶೀಲತೆಯ ಜತೆಗೆ ವೈಜ್ಞಾನಿಕ ಮನೋಭಾವನೆ ಬೆಳೆಸಬೇಕು, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಲು ಹಾಗೂ ವಿಜ್ಞಾನ ಕ್ಷೇತ್ರದೆಡೆಗೆ ಅವರನ್ನು ಪ್ರೋತ್ಸಾಹಿಸಲು ಉತ್ತಮ ವೇದಿಕೆಯಾಗಿದೆ ಎಂದರು.
ಡಯಟ್(ಅಭಿವೃದ್ಧಿ) ಉಪನಿರ್ದೇಶಕ ಕೆ.ಮಂಜುನಾಥ ಮಾತನಾಡಿ, ವಿಜ್ಞಾನ ಕುರಿತ ಪ್ರಾತ್ಯಕ್ಷಿಕೆಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಲು ಶಿಕ್ಷಕರ ಶ್ರಮವೇ ಕಾರಣ. ಸಮಾಜಕ್ಕೆ ಉಪಯೋಗವಾಗುವಂತಹ ಆವಿಷ್ಕಾರಗಳನ್ನು ಮಾಡುವಂತೆ ಇನ್ನೂ ಹೆಚ್ಚಿನ ರೀತಿಯಲ್ಲಿ ಮಕ್ಕಳನ್ನು ಶಿಕ್ಷಕರು ಹುರಿದುಂಬಿಸಬೇಕು ಎಂದರು. ಡಯಟ್ ಪ್ರಾಚಾರ್ಯ ರಾಮಕೃಷ್ಣಯ್ಯ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಉಮೇಶ್, ಉಪ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಕೆ.ಕೃಷ್ಣಮೂರ್ತಿ, ನೋಡಲ್ ಅಧಿಕಾರಿ ಸಿದ್ದಯ್ಯ, ನಿವೃತ್ತ ಸಹನಿರ್ದೇಶಕ ಈಶ್ವರಯ್ಯ ಮತ್ತಿತರರು ಇದ್ದರು.
ಅಂಗಡಿಯಿಂದ ತಂದು ಪ್ರಾತ್ಯಕ್ಷಿಕೆ ಪ್ರದರ್ಶನ:
ಜಿಲ್ಲಾಮಟ್ಟದ ಇನ್‌ಸ್ೈ ರ್ ಪ್ರದರ್ಶನದಲ್ಲಿ ಪ್ರದರ್ಶಿತವಾದ ಬಹುತೇಕ ಪ್ರಾತ್ಯಕ್ಷಿಕೆಗಳು ಅಂಗಡಿಯಿಂದ ತಂದಿದ್ದವು, ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಕೆರಳಿಸಲು ಅವರ ಸಾಮರ್ಥ್ಯಕ್ಕೆ ತಕ್ಕನಾದ ಹೊಸ ಸೃಜನಾತ್ಮಕ ಪ್ರಯೋಗಗಳನ್ನು ಮಾಡಿಸಬೇಕಾದ ಕೆಲವು ಶಿಕ್ಷಕರು ಶಾಲೆಯಲ್ಲಿದ್ದ ಹಣ ಬಳಕೆಗೆ ಕಷ್ಟಪಟ್ಟಂತಿತ್ತು. ಆದರೆ, ಕೆಲವು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹೆಚ್ಚು ಆಸಕ್ತಿವಹಿಸಿ ಪ್ರಾತ್ಯಕ್ಷಿಕೆಗಳನ್ನು ಮಾಡಿದ್ದು ಕಾಣಿಸಿತು, ಕಳೆದ ವರ್ಷದ ಪ್ರಾತ್ಯಕ್ಷಿಕೆಗಳ ಸಂಖ್ಯೆಯೂ ಕಡಿಮೆ ಇರಲಿಲ್ಲ.