

ಆನೇಕಲ್: ಶಾಲೆಗಳಿಗೆ ಭೇಟಿ ನೀಡಿ ಕರೊನಾ ಮುನ್ನೆಚ್ಚರಿಕೆ ಕ್ರಮಗಳ ಪರಿಶೀಲನೆ ಹಾಗೂ ಕೊರತೆ ಇದ್ದೆಡೆ ಸರಿಪಡಿಸುವ ನಿಟ್ಟಿನಲ್ಲಿ
ಪ್ರತಿ ಜಿಲ್ಲೆಗೊಂದು ವಿಚಕ್ಷಣಾ ದಳ ರಚಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.
ತಾಲೂಕಿನ ವಿವಿಧ ಶಾಲೆಗಳಿಗೆ ಶುಕ್ರವಾರ ಭೇಟಿ ನೀಡಿದ ನಂತರ ಹೆನ್ನಾಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,
ಕರೊನಾ ಬಗ್ಗೆ ಪಾಲಕರಲ್ಲಿ ಆತಂಕ ಬೇಡ. ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡರೆ ತೊಂದರೆ ಇರುವುದಿಲ್ಲ. ಹಾಗೆಯೇ ಕೋವಿಡ್ ಎರಡನೇ ಅಲೆ ವಿಚಾರವಾಗಿ ತಜ್ಞರ ಜತೆ ಮಾತನಾಡಿದ್ದು, ಮುನ್ನೆಚ್ಚರಿಕೆ ಕ್ರಮ ಮತ್ತು ವ್ಯಾಕ್ಸಿನ್ ತೆಗೆದುಕೊಂಡರೆ ತೊಂದರೆ ಇಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ ಪಾಲಕರು ಆತಂಕಕ್ಕೆ ಒಳಗಾಗಬಾರದು ಎಂದು ಸಚಿವರು ಮನವಿ ಮಾಡಿದರು.
ಮಾರ್ಚ್, ಏಪ್ರಿಲ್‌ನಲ್ಲಿ ಪರೀಕ್ಷೆ ಇಲ್ಲ: ದೊಮ್ಮಸಂದ್ರದ ಸರಸ್ವತಿ ವಿದ್ಯಾನಿಕೇತನ ಶಾಲೆಗೆ ಭೇಟಿ ನೀಡಿದ ಸಚಿವರು, ವಿಜ್ಞಾನ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರು. ಮಾರ್ಚ್, ಏಪ್ರಿಲ್‌ನಲ್ಲಿ ಪರೀಕ್ಷೆ ನಡೆಸುವುದಿಲ್ಲ, ಎಷ್ಟು ಪಾಠ ಕಡಿತ ಮಾಡಲಾಗುತ್ತದೆ ಎನ್ನುವುದನ್ನು ಎರಡು ದಿನದಲ್ಲಿ ತಿಳಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.
ಡಿಡಿಪಿಐಗಳಿಗೆ ನೋಟಿಸ್: ಮಾರ್ಗಸೂಚಿ ಕಳುಹಿಸುವ ಜತೆಗೆ ನಾವು ಮತ್ತು ಶಿಕ್ಷಣ ಇಲಾಖೆ ಆಯುಕ್ತರು ಎರಡು ಸಾರಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಿದ್ಧತೆ ಬಗ್ಗೆ ಮಾಹಿತಿ ನೀಡಿದ್ದರೂ ಹಾಸನ ಮತ್ತು ಚಿಕ್ಕಬಳ್ಳಾಪುರದಲ್ಲಿ ಲೋಪ ಆಗಿರುವುದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಎರಡೂ ಜಿಲ್ಲೆಯ ಡಿಡಿಪಿಐಗಳಿಗೆ ನೋಟಿಸ್ ನೀಡಲಾಗುವುದು ಎಂದು ಸಚಿವರು ತಿಳಿಸಿದರು.
ಹಳೇ ಪಾಸ್‌ಗೆ ಅವಕಾಶ: ಈ ಹಿಂದೆಯೇ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಹಳೇ ಪಾಸ್ ತೋರಿಸಿ ಸರ್ಕಾರಿ ಬಸ್ ಗಳಲ್ಲಿ ಓಡಾಡಲು ಸಾರಿಗೆ ಇಲಾಖೆ ಅವಕಾಶ ಕೊಡಬೇಕೆಂದು ಸೂಚಿಸಲಾಗಿತ್ತು. ಮತ್ತೊಮ್ಮೆ ಈ ಬಗ್ಗೆ ಸಾರಿಗೆ ಇಲಾಖೆ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಮಾತನಾಡಲಾಗುವುದು ಎಂದು ಸುರೇಶ್‌ಕುಮಾರ್ ತಿಳಿಸಿದರು.
ಶಾಲೆ ಸ್ಥಗಿತ ಇಲ್ಲ: ‘ಈ ಹಿಂದೆ ಎರಡು ಬಾರಿ ಶಾಲೆ ಆರಂಭ ಮಾಡುವುದಾಗಿ ಹೇಳಿ ಆರಂಭಿಸಲಿಲ್ಲ. ಈಗ ಬ್ರಿಟನ್ ವೈರಸ್ ಬಂದಿದೆ ಎಂದು ಶಾಲೆ ಮತ್ತೆ ಮುಚ್ಚದಿರಿ, ನನಗೆ ಓದಿಕೊಳ್ಳಲು ಸಮಸ್ಯೆಯಾಗುತ್ತದೆ’ ಎಂದು ಚಂದಾಪುರ ಶಾಲೆಯಲ್ಲಿ ನೆರಳೂರು ಗ್ರಾಮದ ಪವಿತ್ರಾ ಎಂಬ ವಿದ್ಯಾರ್ಥಿನಿ ಸಚಿವರಲ್ಲಿ ಮನವಿ ಮಾಡಿದಳು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಶಾಲೆ ಸ್ಥಗಿತಗೊಳಿಸುವುದಿಲ್ಲ ಎಂದು ಭರವಸೆ ನೀಡಿದರು. ಚಂದಾಪುರ ಶಾಲೆಯಲ್ಲಿ ವಿದ್ಯಾರ್ಥಿಯಿಂದ ಬೋರ್ಡ್ ಮೇಲೆ ‘ಬನ್ನಿ ಕರೊನಾ ಓಡಿಸೋಣ, ವಿದ್ಯಾರ್ಥಿಗಳನ್ನು ಶಾಲೆಯಲ್ಲಿ ಓದಿಸೋಣ’ ಎಂದು ಬರೆಸಿದ ಸಚಿವರು ಇದು ನಮಗೆ ಮುಖ್ಯ ಎಂದರು.
ಬಾಲಕನೊಂದಿಗೆ ಕುಶಲೋಪರಿ: ಬೆಳಗ್ಗೆ 9.30ಕ್ಕೆ ತಾಲೂಕಿನ ಹೆಬ್ಬಗೋಡಿ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿದ ಸಚಿವರು, ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿದರು. ಮಕ್ಕಳೊಂದಿಗೆ ಪಾಠದ ವಿಚಾರವಾಗಿ ಚರ್ಚಿಸಿದರು. ಹೆನ್ನಾಗರ, ಅತ್ತಿಬೆಲೆ, ಚಂದಾಪುರ, ಸರ್ಜಾಪುರ ಶಾಲೆಗೆ ಭೇಟಿ ನೀಡಿದರು. ಹೆನ್ನಾಗರ ಶಾಲೆಯಲ್ಲಿ ಮಕ್ಕಳೊಂದಿಗೆ ಕರೊನಾ ವಿಚಾರವಾಗಿ ಚರ್ಚೆ ನಡೆಸಿದರು. ಇದೇ ಸಂದರ್ಭದಲ್ಲಿ ಬಾಲಕ ರೋಹಿತ್ ಎಂಬಾತ ತಮ್ಮನನ್ನು ಪಕ್ಕದಲ್ಲಿ ಕೂರಿಸಿಕೊಂಡಿದ್ದನ್ನು ಗಮನಿಸಿದ ಶಿಕ್ಷಣ ಸಚಿವರು, ಯಾರು ಈ ಪುಟ್ಟ ಬಾಲಕ ಎಂದು ಪ್ರಶ್ನೆ ಮಾಡಿದರು. ಪ್ರತಿಕ್ರಿಯಿಸಿದ ಬಾಲಕ, ಮನೆಯಲ್ಲಿ ಯಾರೂ ಇಲ್ಲದ ಕಾರಣ ಸಹೋದರ ಪ್ರಜ್ವಲ್‌ನನ್ನು ಶಾಲೆಗೆ ಕರೆತಂದಿರುವುದಾಗಿ ಉತ್ತರಿಸಿದ. ನೀನು ಓದಬೇಕು ಎಂದು ಸಚಿವರು ತಾಕೀತು ಮಾಡಿದರು.
ಸರ್ಜಾಪುರ ಶಾಲೆಯಲ್ಲಿ ಹಿಂದಿ ಶಿಕ್ಷಕರೊಬ್ಬರು ಪಾಠ ಮಾಡುವಾಗ ಸಚಿವರು ವಿದ್ಯಾರ್ಥಿಗಳೊಂದಿಗೆ ಕೂತು ಪಾಠ ಕೇಳಿದರು. ಪಾಠ ಆಲಿಸಿದ ಸಚಿವರು ಮಕ್ಕಳಿಗೆ ಚೆನ್ನಾಗಿ ಕಲಿಸುತ್ತಿದ್ದೀರಿ ಎಂದು ಸಂತಸ ವ್ಯಕ್ತಪಡಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಆರ್.ರಾಮಮೂರ್ತಿ, ತಹಸೀಲ್ದಾರ್ ಮಹದೇವಯ್ಯ, ಆರೋಗ್ಯ ಅಧಿಕಾರಿ ಡಾ.ವಿನಯ್ ಹಾಗೂ ಅಧಿಕಾರಿ ವರ್ಗದವರು ಹಾಜರಿದ್ದರು.
ಶಾಲೆ ಆರಂಭದ ಮೊದಲ ದಿನ ಖುದ್ದು ಭೇಟಿ ನೀಡಿದ್ದೇನೆ. ಇದು ನಿರಂತರವಾಗಿರುತ್ತದೆ. ಹಾಗೆಯೇ ನ್ಯೂನತೆ ಇದ್ದಲ್ಲಿ ಸರಿಪಡಿಸಿಕೊಳ್ಳಲಾಗುವುದು. ಮೊದಲ ದಿನವಾಗಿದ್ದರಿಂದ ಹೆಚ್ಚಿನ ವಿದ್ಯಾರ್ಥಿಗಳ ಹಾಜರಾತಿ ನಿರೀಕ್ಷೆ ಮಾಡಿಲ್ಲ. ಇಂದು ಶೇ.35 ರಿಂದ 40 ವಿದ್ಯಾರ್ಥಿಗಳು ಶಾಲೆಗೆ ಬಂದಿದ್ದಾರೆ. ರಾತ್ರಿ ಹೊಸ ವರ್ಷದ ಸಂಭ್ರಮಾಚರಣೆ ಇದ್ದುದರಿಂದ ತಡವಾಗಿ ಎದ್ದಿರಬಹುದು. ಸೋಮವಾರದಿಂದ ಶಾಲೆಗೆ ಹೋಗಲು ನಿರ್ಧರಿಸಿರಬಹುದು. ಎಸ್. ಸುರೇಶ್ ಕುಮಾರ್, ಶಿಕ್ಷಣ ಸಚಿವ