ಕೇರಳ ವಾಹನಗಳ ಮೇಲೆ ಕಣ್ಣು

06-GPT-2A
Published on

ಗುಂಡ್ಲುಪೇಟೆ: ನೆರೆಯ ಕೇರಳದಿಂದ ತ್ಯಾಜ್ಯಗಳನ್ನು ತಾಲೂಕಿಗೆ ಸಾಗಣೆ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಕೇರಳ ರಾಜ್ಯದ ವಾಹನಗಳ ಮೇಲೆ ಕಣ್ಣಿಟ್ಟಿದೆ.


ಹಲವು ವರ್ಷಗಳಿಂದ ಕೇರಳದಿಂದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಕದ್ದುಮುಚ್ಚಿ ತಂದು ತಾಲೂಕಿನ ನಾನಾ ಭಾಗಗಳಲ್ಲಿ ಸುರಿಯಲಾಗುತ್ತಿದೆ. ಅಲ್ಲದೆ, ವೈದ್ಯಕೀಯ ತ್ಯಾಜ್ಯಗಳನ್ನು ಪುರಸಭೆಯ ಕಸವಿಲೇವಾರಿ ಘಟಕ ಹಾಗೂ ರಸ್ತೆ ಬದಿಯ ನಿರ್ಜನ ಪ್ರದೇಶಗಳಲ್ಲಿ ಸುರಿಯುತ್ತಿರುವ ಪ್ರಕರಣಗಳು ಕಂಡು ಬರುತ್ತಿವೆ. ರಾಜ್ಯದ ಗಡಿಯಲ್ಲಿ ಚೆಕ್ ಪೋಸ್ಟ್‌ಗಳಿದ್ದರೂ ಕೇರಳದಿಂದ ಅವ್ಯಾಹತವಾಗಿ ತ್ಯಾಜ್ಯ ತರುತ್ತಿರುವುದು ಸಂಘಟನೆಗಳು ಹಾಗೂ ಸಾರ್ವಜನಿಕರ ಕಣ್ಣು ಕೆಂಪಾಗಿಸಿದೆ.


ಈ ಹಿನ್ನೆಲೆಯಲ್ಲಿ ಚುರುಕಾದ ಅರಣ್ಯ ಇಲಾಖೆ ಕೇರಳ ಗಡಿಯ ಮೂಲೆಹೊಳೆ ಚೆಕ್‌ಪೋಸ್ಟ್‌ನಲ್ಲಿ ಎಲ್ಲ ವಾಹನಗಳ ಪರಿಶೀಲನೆ ನಡೆಸಿ ಅನುಮಾನಸ್ಪದ ವಾಹನಗಳ ತಪಾಸಣೆ ಕೈಗೊಂಡಿದೆ. ರಾಜ್ಯದಿಂದ ತರಕಾರಿ, ಬಾಳೆಕಾಯಿ ಮುಂತಾದ ಉತ್ಪನ್ನಗಳನ್ನು ಕೊಂಡೊಯ್ದು ವಾಪಸಾಗುವ ವಾಹನಗಳಲ್ಲಿ ಬಾಳೆದಿಂಡು, ಬಾಳೆ ಎಲೆ ಸೇರಿದಂತೆ ಯಾವುದೇ ನಿರುಪಯುಕ್ತ ವಸ್ತುಗಳು ಕಂಡುಬಂದರೆ ಗಡಿಯಲ್ಲಿಯೇ ತೆರವು ಮಾಡಿಸಲಾಗುತ್ತಿದೆ. ಪ್ಲಾಸ್ಟಿಕ್ ಮುಂತಾದ ವಸ್ತುಗಳ ಸಾಗಣೆ ಮಾಡುವ ವಾಹನಗಳ ದಾಖಲೆಗಳನ್ನು ಪರಿಶೀಲಿಸಿ ಸಕ್ರಮವಾಗಿದ್ದರೆ ಮಾತ್ರ ಒಳಗೆ ಬಿಡಲಾಗುತ್ತಿದೆ.

ಮೂಲೆಹೊಳೆ ಚೆಕ್‌ಪೋಸ್ಟ್‌ನಲ್ಲಿ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಪೊಲೀಸರನ್ನು ಮದ್ದೂರಿನ ಬಳಿಗೆ ಸ್ಥಳಾಂತರಿಸಲಾಗಿದೆ. ಇದರಿಂದ ಅರಣ್ಯ ಇಲಾಖೆಯ ಒಬ್ಬರೇ ಸಿಬ್ಬಂದಿ ಚೆಕ್‌ಪೋಸ್ಟ್ ಕರ್ತವ್ಯ ಮಾಡಬೇಕಾಗಿದೆ. ಅರಣ್ಯ ಉತನ್ನಗಳ ಸಾಗಣೆ ಬಗ್ಗೆ ಮಾತ್ರ ಗಮನಹರಿಸುತ್ತಿದ್ದ ಸಿಬ್ಬಂದಿ ಇತ್ತೀಚೆಗೆ ತ್ಯಾಜ್ಯ ಸಾಗಣೆ ವಾಹನಗಳ ಬಗ್ಗೆಯೂ ನಿಗಾ ಇಡುವಂತಾಗಿದೆ. ಸಿಬ್ಬಂದಿ ಕೊರತೆ ನಡುವೆಯೂ ಅರಣ್ಯ ಇಲಾಖೆ ತಪಾಸಣೆ ಕೈಗೊಂಡಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

ಇತ್ತೀಚೆಗೆ ಕೇರಳದಿಂದ ತ್ಯಾಜ್ಯ ಸಾಗಣೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿಂದ ವಾಪಸಾಗುವ ವಾಹನಗಳ ಬಗ್ಗೆ ಗಮಹಹರಿಸಲಾಗುತ್ತಿದೆ. ಅಲ್ಲಿಂದ ವಾಪಸಾಗುವ ವಾಹಗಳಲ್ಲಿ ಬಾಳೆದಿಂಡು ಹಾಗೂ ಬಾಳೆ ಎಲೆಗಳನ್ನು ತುಂಬಿಸಿ ಕಳಿಸಲಾಗುತ್ತಿದ್ದು ಇದನ್ನು ತಾಲೂಕಿನ ನಿರ್ಜನ ಪ್ರದೇಶಗಳಲ್ಲಿ ಬೀಸಾಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಹಣ್ಣು, ತರಕಾರಿ ಸಾಗಿಸುವ ಖಾಲಿ ವಾಹನಗಳ ಬಗ್ಗೆಯೂ ನಿಗಾ ಇಡಲಾಗಿದೆ. ಇಂತಹ ವಾಹನಗಳ ಚಾಲಕರಿಗೆ ಎಚ್ಚರಿಕೆ ನೀಡಲಾಗಿದ್ದು ಮುಂದಿನ ದಿನಗಳಲ್ಲಿ ದಂಡ ವಿಧಿಸಲಾಗುವುದು.
ನಿಸಾರ್ ಅಹಮದ್, ಮೂಲೆಹೊಳೆ ವಲಯದ ಆರ್‌ಎಫ್‌ಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net