

ಕೊಳ್ಳೇಗಾಲ: ಪಟ್ಟಣದೊಳಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ (209)ಯ ಫುಟ್‌ಪಾತ್‌ಗೆ ಇಂಟರ್‌ಲಾಕ್ ಟೈಲ್ಸ್ ಅಳವಡಿಕೆ ಕಾಮಗಾರಿ ಚುರುಕುಗೊಂಡಿದೆ.
ನಗರಸಭೆಯ 14ನೇ ವಾರ್ಡ್ ವ್ಯಾಪ್ತಿಯಲ್ಲಿ ಫುಟ್‌ಪಾತ್‌ಗೆ ಇಂಟರ್‌ಲಾಕ್ ಟೈಲ್ಸ್ ಅಳವಡಿಕೆ ಕಾಮಗಾರಿ ಭರದಿಂದ ಸಾಗುತ್ತಿದೆ. ಮಂಗಳವಾರ ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ಉಪಾಧ್ಯಕ್ಷ ಹಾಗೂ 14ನೇ ವಾರ್ಡ್ ಸದಸ್ಯ ಎ.ಪಿ.ಶಂಕರ್ ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ನ್ಯೂನತೆಯಾಗದಂತೆ ಕ್ರಿಯಾ ಯೋಜನೆಯಂತೆಯೇ ಕಾಮಗಾರಿ ನಡೆಯಬೇಕು. ಹೆದ್ದಾರಿಯಲ್ಲಿ ಬಾರಿ ವಾಹನಗಳು ಸಂಚಾರವಿದ್ದು, ಒಂದು ವೇಳೆ ಆಕಸ್ಮಿಕವಾಗಿ ವಾಹನಗಳು ಫುಟ್‌ಪಾತ್ ಮೇಲೆ ಚಲಿಸಿದರೆ ಇಂಟರ್‌ಲಾಕ್ ಟೈಲ್ಸ್ ಹಳ್ಳ ಹಿಡಿಯುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ನೆಲವನ್ನು ಗಟ್ಟಿಗೊಳಿಸಿದ ನಂತರ ಟೈಲ್ಸ್ ಅಳವಡಿಸುವಂತೆ ಗುತ್ತಿಗೆದಾರರಿಗೆ ಅಧ್ಯಕ್ಷೆ ರೇಖಾ ರಮೇಶ್ ಸೂಚಿಸಿದರು.
ನಗರಸಭೆ ಉಪಾಧ್ಯಕ್ಷ ಎ.ಪಿ ಶಂಕರ್ ಮಾತನಾಡಿ, ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯ 4 ನೇ ಹಂತದ ಅನುದಾನ ಕಾಮಗಾರಿಯಲ್ಲಿ ಪಾದಚಾರಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಹೆದ್ದಾರಿಯ ಎರಡು ಬದಿಯಲ್ಲಿ ಒಟ್ಟು 800 ಮೀಟರ್ ಕಾಮಗಾರಿ ಆರಂಭಗೊಂಡಿದೆ. ಪಟ್ಟಣದ ಅಚ್ಗಾಳ್ ವೃತ್ತದಿಂದ ಶಾಂತಿ ಟಾಕೀಸ್‌ವರೆವಿಗೂ ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿದೆ. ಸ್ಥಳಕ್ಕೆ ಭೇಟಿ ನೀಡಿ ನ್ಯೂನತೆಗಳನ್ನು ಸರಿಪಡಿಸಿಕೊಳ್ಳುವಂತೆ ನಿರ್ದೇಶನ ನೀಡಿದ್ದೇವೆ. ಇಂಟರ್ ಲಾಕ್ ಟೈಲ್ಸ್ ಅಳವಡಿಕೆ ನಂತರ ಹೆದ್ದಾರಿ ಸುಂದರವಾಗಿ ಕಾಣಲಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಎಸ್.ರಮೇಶ್, ನಗರಸಭೆ ಸದಸ ಮಂಜುನಾಥ್, ರಾಮಕೃಷ್ಣ ಇತರರು ಇದ್ದರು.