

ನರಗುಂದ: ಬೆಣ್ಣೆಹಳ್ಳದ ಪ್ರವಾಹಕ್ಕೆ ತುತ್ತಾಗುವ ತಾಲೂಕಿನ ಕುರ್ಲಗೇರಿ, ಸುರಕೋಡ, ಹದ್ಲಿ ಗ್ರಾಮಗಳಿಗೆ ಶಾಸಕ ಸಿ.ಸಿ. ಪಾಟೀಲ ಶುಕ್ರವಾರ ಭೇಟಿ ನೀಡಿ ಬೆಳೆ ಹಾನಿ ಸಮೀಕ್ಷೆ, ರಸ್ತೆ, ಸಾರ್ವಜನಿಕರ ರಕ್ಷಣೆಗೆ ಕೈಗೊಳ್ಳಬೇಕಾದ ಅಗತ್ಯ ಮುಂಜಾಗ್ರತೆ ಕ್ರಮಗಳ ಕುರಿತು ಸ್ಥಳ ಪರಿಶೀಲನೆ ನಡೆಸಿ ತಮ್ಮೊಂದಿಗಿದ್ದ ತಾಲೂಕು ಮಟ್ಟದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕುರ್ಲಗೇರಿ ಸೇರಿ ಮತಕ್ಷೇತ್ರದ ವಿವಿಧ ಗ್ರಾಮಗಳ ಬೆಣ್ಣೆಹಳ್ಳದ ಸೇತುವೆ ಬಳಿಯಿರುವ ಜಾಲಿ ಮುಳ್ಳಿನ ಕಂಟಿಗಳನ್ನು ಸಂಪೂರ್ಣ ತೆರವುಗೊಳಿಸಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು. ಕುರ್ಲಗೇರಿ, ಸುರಕೋಡದಿಂದ ಹದ್ಲಿ ಒಳರಸ್ತೆ ದುರಸ್ತಿಗೊಳಿಸುವುದರ ಜತೆಗೆ ಮಳೆಗೆ ಹಾನಿಯಾಗಿರುವ ಅವಶ್ಯಕ ರಸ್ತೆಗಳನ್ನು ಸರಿಪಡಿಸಬೇಕು ಎಂದು ಪಿಡಬ್ಲ್ಯುಡಿ ಅಧಿಕಾರಿ ಪ್ರಭು ಹುನಗುಂದ ಅವರಿಗೆ ಸೂಚಿಸಿದರು.
ಈ ಹಿಂದೆ ಭೀಕರ ಪ್ರವಾಹಕ್ಕೆ ತುತ್ತಾಗಿದ್ದ ಕುರ್ಲಗೇರಿ ಗ್ರಾಮಸ್ಥರಿಗೆ 448 ಆಸರೆ ಮನೆ, ಸುಸಜ್ಜಿತ ಸರ್ಕಾರಿ ಶಾಲೆ ಕಟ್ಟಡ ನಿರ್ವಿುಸಿಕೊಟ್ಟಿದ್ದೇನೆ. ಆದರೆ, ಕೆಲವರು ಹೆಚ್ಚುವರಿ ಮನೆಗಳನ್ನು ಪಡೆದಿದ್ದರಿಂದ ಮನೆಗಳ ಹಂಚಿಕೆಗೆ ಸಾಕಷ್ಟು ಸಮಸ್ಯೆ ಉದ್ಭವಗೊಂಡು ಬಹುತೇಕ ಮನೆಗಳು ಪಾಳು ಬೀಳುವಂತಾಗಿವೆ. ಸರ್ಕಾರದಿಂದ ನಾನು ಮನೆಗಳನ್ನು ನಿರ್ವಿುಸಿಕೊಟ್ಟಿದ್ದೇನೆ. ಆದರೆ, ಅವುಗಳನ್ನು ಹಂಚಿಕೆ ಮಾಡಿಕೊಡುವುದು ಸ್ಥಳೀಯ ಗ್ರಾಪಂ, ತಾಲೂಕಾಡಳಿತದ ಜವಾಬ್ದಾರಿ. ಕುರ್ಲಗೇರಿ ಗ್ರಾಮಸ್ಥರು ಬಯಸಿದರೆ ಹೊಸದಾಗಿ ಗ್ರಾಮಸಭೆ ನಡೆಸಿ ಮನೆ ಹಂಚಿಕೆ ಮಾಡಿಕೊಳ್ಳಬಹುದು ಎಂದು ಸಾರ್ವಜನಿಕರಿಗೆ ಸಲಹೆ ನೀಡಿದರು.
ಬೆಣ್ಣೆಹಳ್ಳ ಪ್ರವಾಹದಿಂದ ತಾಲೂಕಿನ ಸುರಕೋಡ ಸಂಪೂರ್ಣ ನಡುಗಡ್ಡೆಯಂತಾಗಿದೆ. ನವ ಗ್ರಾಮದ ಜನರಿಗೆ ತಕ್ಷಣವೇ ಸಮರ್ಪಕ ಕುಡಿಯುವ ನೀರು ಪೂರೈಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ನಿರಂತರ ಮಳೆ ಹಾಗೂ ಬೆಣ್ಣೆಹಳ್ಳದ ಭೀಕರ ಪ್ರವಾಹದಿಂದ ತಾಲೂಕಿನ ವಿವಿಧ ಗ್ರಾಮಗಳ ರೈತರು ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ಹೆಸರು, ಗೋವಿನಜೋಳ, ಸೂರ್ಯಕಾಂತಿ, ಮುಂತಾದ ಬೆಳೆಗಳು ಹಾನಿಗೀಡಾಗಿವೆ. ಈ ಬಗ್ಗೆ ಕೃಷಿ, ಕಂದಾಯ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ಕೈಗೊಂಡು ಸರ್ಕಾರ ಹಾಗೂ ಗದಗ ಜಿಲ್ಲಾಡಳಿತಕ್ಕೆ ನಿಖರ ಮಾಹಿತಿ ನೀಡುವುದರ ಜತೆಗೆ ಸಂಕಷ್ಟದಲ್ಲಿರುವ ರೈತರ ನೆರವಿಗೆ ಮುಂದಾಗಬೇಕು ಎಂದು ಕೃಷಿ ಇಲಾಖೆ ಅಧಿಕಾರಿ ಮಂಜುನಾಥ ಜನಮಟ್ಟಿ ಹಾಗೂ ತಹಸೀಲ್ದಾರ್ ಶ್ರೀಶೈಲ ತಳವಾರ ಅವರಿಗೆ ಸೂಚಿಸಿದರು.
ತಾಲೂಕಿನ ಹದ್ಲಿ ಗ್ರಾಮಕ್ಕೆ ಭೇಟಿ ನೀಡಿದ ಶಾಸಕರು, ಗ್ರಾಮದ 25ಕ್ಕೂ ಅಧಿಕ ಮಹಿಳೆಯರು ಧಾರಾಕಾರ ಮಳೆಯಿಂದ ನಮ್ಮ ಮನೆಗಳಿಗೆ ನೀರು ನುಗ್ಗಿದೆ. ಸಮರ್ಪಕ ರಸ್ತೆ, ಚರಂಡಿಯಿಲ್ಲದೆ ನರಕಯಾತನೆ ಪಡುವಂತಾಗಿದೆ ಎಂದು ಅಳಲು ತೋಡಿಕೊಂಡರು. ಮಹಿಳೆಯರ ಸಮಸ್ಯೆಗೆ ಸ್ಪಂದಿಸಿದ ಶಾಸಕರು, ರಸ್ತೆ, ಚರಂಡಿ ನಿರ್ವಣಕ್ಕೆ ಶಾಸಕರ ಅನುದಾನದಲ್ಲಿ 10 ಲಕ್ಷ ರೂ.ಗಳನ್ನು ತಕ್ಷಣವೇ ನೀಡಲಾಗುವುದು ಎಂದು ಭರವಸೆ ನೀಡಿದರು.
ತಾಪಂ ಇಒ ಎಸ್.ಕೆ. ಇನಾಂದಾರ, ಕಂದಾಯ ನಿರೀಕ್ಷಕ ಎಸ್.ಎಲ್. ಪಾಟೀಲ, ಈರಣ್ಣ ಕಳಸಣ್ಣವರ, ಜಿಪಂ ಇಲಾಖೆ ಅಧಿಕಾರಿ ಎನ್.ವೈ. ಬೇವಿನಗಿಡದ, ಬಿಇಒ ಡಾ.ಗುರುನಾಥ ಹೂಗಾರ, ನಾಗನಗೌಡ ತಿಮ್ಮನಗೌಡ್ರ, ಪ್ರಕಾಶಗೌಡ ತಿರಕನಗೌಡ್ರ, ಬಿ.ಬಿ. ಐನಾಪೂರ, ಚಂದ್ರು ದಂಡಿನ, ಎಸ್.ಬಿ. ಕರಿಗೌಡ್ರ, ಜಿನ್ನಾಸಾಬ್ ಮುಲ್ಲಾನವರ, ಮಲ್ಲಪ್ಪ ಮೇಟಿ, ಅನಿಲ ಧರೆಯಣ್ಣವರ, ನಾಗರಾಜ ನೆಗಳೂರ, ಬಿ.ಎಸ್. ಸುಂಕದ, ರಾಜುಗೌಡ ಪಾಟೀಲ, ಭೀಮಸಿ ಯಾವಗಲ್ಲ, ಈಶ್ವರಗೌಡ ಪಾಟೀಲ, ಸಂತೋಷ ಹಂಚಿನಾಳ, ವಿಠ್ಠಲ ಹವಾಲ್ದಾರ, ಇತರರಿದ್ದರು.