

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಕಾಮಗಾರಿ ಅಗತ್ಯ ವೇಗವನ್ನು ಪಡೆದುಕೊಂಡು ಜನವರಿ ತಿಂಗಳ ಒಳಗಾಗಿ ಚತುಷ್ಪಥ ರಸ್ತೆಯು ಸಂಚಾರಯೋಗ್ಯವನ್ನಾಗಿಸುವ ಭರವಸೆ ಹೊಂದಲಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.
ಶನಿವಾರ 34ನೇ ನೆಕ್ಕಿಲಾಡಿಯ ಪುತ್ತೂರು ತಿರುವಿನ ಬಳಿ ನಿರ್ಮಿಸಲಾದ ಅಂಡರ್‌ಪಾಸ್ ಮತ್ತದರ ಸಾಧಕ ಬಾಧಕಗಳ ಬಗ್ಗೆ ಹೆದ್ದಾರಿ ಇಲಾಖಾಧಿಕಾರಿಗಳ, ಪಿಡಿಡಬ್ಲ್ಯುಡಿ ಇಲಾಖಾಧಿಕಾರಿಗಳ ಹಾಗೂ ಕೆಎನ್‌ಆರ್ ಸಂಸ್ಥೆಯ ಅಧಿಕಾರಿಗಳೊಂದಿಗೆ ಪರಿಶೀಲನಾ ಕಾರ್ಯ ನಡೆಸಿ ಮಾತನಾಡಿದರು.
ಪ್ರಸಕ್ತ ಪುತ್ತೂರು ರಸ್ತೆ ಹೆದ್ದಾರಿಗೆ ಜೋಡಿಸಲ್ಪಡುವ ಪ್ರಕ್ರಿಯೆಯಲ್ಲಿ ಅನಗತ್ಯ ತಿರುವು ಲಭಿಸಲಿದ್ದು, ಅದರ ನಿವಾರಣೆಗೆ ಅಂಡರ್ ಪಾಸ್ ಇರುವಲ್ಲಿಯೇ ನೇರ ಸಂಪರ್ಕ ರಸ್ತೆಯನ್ನು ನಿರ್ಮಿಸಿ ಪುತ್ತೂರು ರಸ್ತೆಗೆ ಸಂಪರ್ಕಿಸುವಂತೆ ಮಾಡಿದರೆ ಉತ್ತಮ ಎಂಬ ಸಾರ್ವಜನಿಕರ ಅಭಿಪ್ರಾಯಕ್ಕೆ ಸ್ಪಂದಿಸಿದ ಶಾಸಕರು ಅದಕ್ಕೆ ಹೆಚ್ಚುವರಿ 10 ಕೋಟಿ ರೂ.ಹಣವನ್ನು ಒದಗಿಸುವ ಆಶ್ವಾಸನೆ ನೀಡಿ, ತ್ವರಿತ ಇಲಾಖಾತ್ಮಕ ಕ್ರಮ ಜರುಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮೆಲ್ಕಾರ್, ಪಾಣೆಮಂಗಳೂರು, ಮಾಣಿಯಲ್ಲಿ ಎತ್ತರಿಸಿದ ರಸ್ತೆಯನ್ನು ನವೆಂಬರ್ ತಿಂಗಳ ಒಳಗಾಗಿ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಹಾಗೂ ಉಪ್ಪಿನಂಗಡಿ ಮತ್ತು ನೆಲ್ಯಾಡಿಗಳಲ್ಲಿ ನಿರ್ಮಿಸಲಾಗುತ್ತಿರುವ ಎತ್ತರಿಸಿದ ಸೇತುವೆಯ ಕಾಮಗಾರಿಯನ್ನು ಜನವರಿಯ ಒಳಗಾಗಿ ಪೂರ್ತಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ನೆಲ್ಯಾಡಿಯಲ್ಲಿ ಅಲ್ಲಿನ ಜನತೆಯ ಒತ್ತಾಯದಂತೆ ಪ್ಲೈಓವರ್ ನಿರ್ಮಾಣ ಕಾರ್ಯ ಅಸಾಧ್ಯವಾಗಿದ್ದು, ನಿಲ್ಲಿಸಲಾಗಿದ್ದ ಎತ್ತರಿಸಿದ ರಸ್ತೆಯ ಕಾಮಗಾರಿಯನ್ನು ಪುನರಾರಂಭಗೊಳಿಸಲಾಗುವುದೆಂದರು.
ಉಪ್ಪಿನಂಗಡಿ ಸರ್ಕಾರಿ ಮಾದರಿ ಶಾಲಾ ಬಳಿ ಅಸಮರ್ಪಕ ಚರಂಡಿ ವ್ಯವಸ್ಥೆಯನ್ನು ತ್ವರಿತವಾಗಿ ಸರಿಪಡಿಸಲು ಕೆಎನ್‌ಆರ್ ಸಂಸ್ಥೆಯ ಅಧಿಕಾರಿಗಳಿಗೆ ನಿರ್ದೇಶನವಿತ್ತರು.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಜಾವೇದ್ ಅಖ್ತಾರ್, ಇಲಾಖಾ ಇಂಜಿನಿಯರ್‌ಗಳಾದ ವಿವೇಕಾನಂದ, ಮಹೇಂದ್ರ ಕುಮಾರ್ ಸಿಂಗ್, ರಘುನಾಥ್ ರೆಡ್ಡಿ, ಪ್ರಮುಖರಾದ ಡಾ.ರಾಜಾರಾಮ ಕೆ.ಬಿ., ರಾಧಾಕೃಷ್ಣ ನಾಕ್, ಮಹಮ್ಮದ್ ತೌಶಿಫ್, ಮುರಳೀಧರ್ ರೈ, ಅಬ್ದುಲ್ ರಹಿಮಾನ್ ಯೂನಿಕ್, ಅಸ್ಕಾರಲಿ, ಸದಾನಂದ, ರೂಪೇಶ್ ರೈ ಅಲಿಮಾರ, ಅನಿಮಿನೇಜಸ್ ಮತ್ತಿತರರು ಉಪಸ್ಥಿತರಿದ್ದರು.
ಪುತ್ತೂರು-ಉಪ್ಪಿನಂಗಡಿ ರಸ್ತೆಯನ್ನು ಮಾದರಿ ರಸ್ತೆಯನ್ನಾಗಿಸುವ ಕನಸನ್ನು ಸಾಕಾರಗೊಳಿಸಲು ನಾಗರಿಕರ ಸಹಕಾರವನ್ನು ಯಾಚಿಸಿದ ಶಾಸಕರು, ಹೆದ್ದಾರಿ ಮಧ್ಯದಲ್ಲಿ ನೆಟ್ಟಿರುವ ಹೂವು, ಹಣ್ಣುಗಳ ಗಿಡ ಮರಗಳನ್ನು, ನೀರು ಸರಬರಾಜಿಗೆ ಅಳವಡಿಸಿದ ಪೈಪುಗಳನ್ನು, ಮ್ಯಾಟ್‌ಗಳನ್ನು ದಯವಿಟ್ಟು ಯಾರೂ ಕದ್ದೊಯ್ಯಬಾರದು. ರಸ್ತೆಯ ಅಲಂಕಾರಕ್ಕಾಗಿ ಅದೆಲ್ಲವನ್ನೂ ಉಳಿಸುವ ನಿಟ್ಟಿನಲ್ಲಿ ನಾಗರಿಕ ಸಮಾಜದ ಸಹಕಾರ ಅಗತ್ಯವಾಗಿದೆ ಎಂದರು.