ಸಿವಿಲ್ ನ್ಯಾಯಾಧೀಶರಿಂದ ಶೌಚಗೃಹಗಳ ಪರಿಶೀಲನೆ

10 HANUR 2
ಹನೂರಿನ ಖಾಸಗಿ ಬಸ್ ನಿಲ್ದಾಣದ ಸಾರ್ವಜನಿಕ ಶೌಚಗೃಹಕ್ಕೆ ನ್ಯಾಯಾಧೀಶ ಈಶ್ವರ್ ಭೇಟಿ ನೀಡಿ ಪರಿಶೀಲಿಸಿದರು. ಅಶೋಕ್, ಮಾದೇಶ್, ನಂದೀಶ್ ಇತರರು ಇದ್ದರು.
Published on

ಹನೂರು: ಪಟ್ಟಣದ ವಿವಿಧೆಡೆ ಇರುವ ಶೌಚಗೃಹಗಳಿಗೆ ಸೋಮವಾರ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಈಶ್ವರ್ ಅವರು ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಶೀಲಿಸಿದರು.

ಮೂಲಸೌಕರ್ಯ ಸಂಬಂಧ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಶೌಚಗೃಹ ಪರಿಶೀಲಿಸಿ ಮಾತನಾಡಿದ ಅವರು, ಶೌಚಗೃಹದಲ್ಲಿ ಪದೇ ಪದೆ ಶುಚಿಗೊಳಿಸುವುದರ ಮೂಲಕ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಅನೈರ್ಮಲ್ಯ ನಿರ್ಮಾಣವಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಅನುಸರಿಸಬೇಕು. ಸಮರ್ಪಕವಾಗಿ ನಿರ್ವಹಣೆಯಾಗಬೇಕು ಎಂದು ಸಿಬ್ಬಂದಿಗೆ ಸೂಚಿಸಿದರು. ಜತೆಗೆ ಸಮರ್ಪಕ ನೀರು ಪೂರೈಕೆ ಹಾಗೂ ವಿದ್ಯುತ್ ಇರುವಂತೆ ನೋಡಿಕೊಳ್ಳಬೇಕು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅಶೋಕ್ ಅವರಿಗೆ ತಿಳಿಸಿದರು.

ಪಟ್ಟಣದ ನಂದೀಶ್ ಎಂಬುವರು ಮಾತನಾಡಿ, ಮಹಿಳೆಯರ ಶೌಚಗೃಹದಲ್ಲಿ ಬಾಗಿಲುಗಳೇ ಇಲ್ಲ. ಸೂಕ್ತ ವ್ಯವಸ್ಥೆ ಇಲ್ಲದ ಪರಿಣಾಮ ಮಹಿಳೆಯರಿಗೆ ಮುಜುಗರವಾಗುವಂತಿದೆ. ಆದ್ದರಿಂದ ಬಾಗಿಲು ಅಳವಡಿಸುವ ಬಗ್ಗೆ ಗಮನಹರಿಸುವಂತೆ ಮನವಿ ಮಾಡಿದರು. ಇದಕ್ಕೆ ನ್ಯಾಯಾಧೀಶರು ಸೂಕ್ತ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಬಳಿಕ ತಹಸೀಲ್ದಾರ್ ಕಚೇರಿಯ ಪ್ರವೇಶ ದ್ವಾರದಲ್ಲಿ ಪಪಂ ವತಿಯಿಂದ ನಿರ್ಮಿಸಿರುವ ಸಾರ್ವಜನಿಕ ಶೌಚಗೃಹ ಬಳಕೆಗೆ ಬಾರದನ್ನು ಕಂಡು ನ್ಯಾಯಾಧೀಶರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಲಕ್ಷಾಂತರ ರೂ. ವೆಚ್ಚದಲ್ಲಿ ಶೌಚಗೃಹವನ್ನು ನಿರ್ಮಿಸಲಾಗಿದೆ. ಆದರೆ ಸಾರ್ವಜನಿಕರ ಉಪಯೋಗಕ್ಕೆ ಬಾರದೇ ಬೀಗ ಹಾಕಿರುವುದು ಎಷ್ಟರ ಮಟ್ಟಿಗೆ ಸರಿ? ಈ ಹಿಂದೆ ಆಗಮಿಸಿದ್ದ ವೇಳೆ ಶೌಚಗೃಹವನ್ನು ಸಾರ್ವಜನಿಕರ ಸೇವೆಗೆ ಒದಗಿಸಲಾಗುವುದು ಎಂದು ತಿಳಿಸಿದ್ದೀರಿ. ಆದರೂ ಈ ಬಗ್ಗೆ ಕ್ರಮವಹಿಸಿಲ್ಲ. ಈ ಕೂಡಲೇ ಶೌಚಗೃಹ ಸಾರ್ವಜನಿಕರ ಬಳಕೆಗೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಪಪಂ ಅಧಿಕಾರಿಗಳಿಗೆ ಸೂಚಿಸಿದರು.

ತಹಸೀಲ್ದಾರ್ ಕಚೇರಿಯ ಹಿಂಭಾಗದಲ್ಲಿರುವ ಬೀಗ ಹಾಕಲಾಗಿದ್ದ ಶೌಚಗೃಹಕ್ಕೆ ತೆರಳಿ ಪರಿಶೀಲಿಸಿದ ನ್ಯಾಯಾಧೀಶರು, ಈ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇಲ್ಲಿಗೆ ನಿತ್ಯ ಸಾರ್ವಜನಿಕರು ಆಗಮಿಸುತ್ತಾರೆ. ಆದರೆ ಶೌಚಗೃಹ ಸೌಕರ್ಯ ಇಲ್ಲದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.

ಇದಕ್ಕೆ ಶಿರಸ್ತೇದಾರ್ ಮಹದೇವನಾಯ್ಕ ಪ್ರತಿಕ್ರಿಯಿಸಿ, ಶೌಚಗೃಹಕ್ಕೆ ನೀರಿನ ಸೌಕರ್ಯ ಇಲ್ಲದ ಪರಿಣಾಮ ಬ್ಲಾಕ್ ಆಗಿದೆ. ಹಾಗಾಗಿ ಬೀಗ ಹಾಕಲಾಗಿದೆ. ಇದರಿಂದ ಇಲ್ಲಿನ ನೌಕರರು ಸಹ ಶೌಚಕ್ಕಾಗಿ ಪಶು ಆಸ್ಪತ್ರೆ ಹಾಗೂ ಬಸ್ ನಿಲ್ದಾಣದ ಶೌಚಗೃಹವನ್ನು ಆಶ್ರಯಿಸುವಂತಾಗಿದೆ. ಈಗಾಗಲೇ ಪಪಂ ವತಿಯಿಂದ ನಿರ್ಮಿಸಿರುವ ಶೌಚಗೃಹ ಬಳಕೆ ಸಂಬಂಧ ಮುಖ್ಯಾಧಿಕಾರಿ ಅವರಿಗೆ ಫೋನ್ ಮಾಡಿದರೂ ಕರೆ ಸ್ವೀಕರಿಸುತ್ತಿಲ್ಲ. ಇದರಿಂದ ತುಂಬಾ ಸಮಸ್ಯೆಯಾಗಿದೆ. ಮುಖ್ಯಾಧಿಕಾರಿ ಅವರು ಸ್ಪಂದಿಸದ ಕಾರಣ ಆವರಣದಲ್ಲಿ ಸ್ವಚ್ಛತೆ ಇಲ್ಲದಂತಾಗಿದ್ದು, ಗ್ರಾಮ ಸಹಾಯಕರಿಂದ ಸ್ವಚ್ಛತೆ ಮಾಡುವಂತಾಗಿದೆ ಎಂದು ಸಮಸ್ಯೆಯನ್ನು ಹೇಳಿಕೊಂಡರು.

ಇದನ್ನು ಕೇಳಿದ ನ್ಯಾಯಾಧೀಶ ಈಶ್ವರ್, ಕೂಡಲೇ ಶೌಚಗೃಹ ಸಾರ್ವಜನಿಕರ ಬಳಕೆಗೆ ಲಭ್ಯವಾಗುವಂತೆ ಕ್ರಮವಹಿಸಬೇಕು ಎಂದು ಮುಖ್ಯಾಧಿಕಾರಿಗೆ ಸೂಚಿಸಿದರು. ಬಳಿಕ ನ್ಯಾಯಾಧೀಶರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಶೌಚಗೃಹಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net