ಜಿಲ್ಲಾಧಿಕಾರಿಯಿಂದ ನಗರ ಪರಿವೀಕ್ಷಣೆ, ಅಭಿವೃದ್ಧಿ ಕಾಮಗಾರಿ ಪರಿಶೀಲನೆ

DC CITY ROUDS
ವಿಜಯಪುರ ನಗರದಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಮತ್ತಿತರರಿದ್ದಾರೆ.
Published on

ವಿಜಯಪುರ: ಜಿಲ್ಲಾಧಿಕಾರಿ ಟಿ.ಭೂಬಾಲನ್ ಶುಕ್ರವಾರ ಬೆಳಗ್ಗೆ ನಗರ ಪರಿವೀಕ್ಷಣೆ ನಡೆಸಿ ರಸ್ತೆ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದರಲ್ಲದೇ ಅತಿಕ್ರಮಣ ತೆರವುಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಬಾಗಲಕೋಟೆ ರಸ್ತೆ, ಅತಾವುಲ್ಲಾ ಚೌಕ್ ಹತ್ತಿರದ ಕಂದಕ ಹಾಗೂ ನವಬಾಗ ರಸ್ತೆಯಲ್ಲಿ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಹಾಗೂ ಅಗಲೀಕರಣ ಕಾಮಗಾರಿಗಳ ಪರಿವೀಕ್ಷಣೆ ಕೈಗೊಂಡಿದ್ದು, ನವಬಾಗ ರಸ್ತೆಯ ಅಗಲೀಕರಣ ಬಗ್ಗೆ ಸರ್ವೇ ಕಾರ್ಯ ಕೈಗೊಂಡು ಅತಿಕ್ರಮಣ ತೆರವುಗೊಳಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಪಾಲಿಕೆಯ ಆಯುಕ್ತರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ವಾರ್ಡ್ ಸಂ.28ರ ಸರ್ಕಾರಿ ಪದವಿ ಪೂರ್ವ ಕಾಲೇಜ್‌ಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಯನ್ನು ಪರಿಶೀಲಿಸಿ, ಕಾಮಗಾರಿಯನ್ನು 15 ದಿನಗಳ ಒಳಗಾಗಿ ಪೂರ್ಣಗೊಳಿಸಿ, ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಕಲ್ಪಿಸುವಂತೆ ಸೂಚನೆ ನೀಡಿದರು.

ಬೇಗಂ ತಾಲಾಬ್ ಪರಿವೀಕ್ಷಣೆ ಕೈಗೊಂಡು, ವಾಯು ವಿಹಾರಕ್ಕೆ ಬರುವ ಸಾರ್ವಜನಿಕರಿಗೆ ಉತ್ತಮ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ, ಉದ್ಯಾನವನದಲ್ಲಿರುವ ಮೂಲ ಸೌಕರ್ಯಗಳು, ಫುಡ್ ಕೋರ್ಟ ಹಾಗೂ ಇತರೆ ಸೌಲಭ್ಯಗಳನ್ನು ಕೂಡಲೇ ಟೆಂಡರ್ ಕರೆದು ಕ್ರಮಕೈಗೊಳ್ಳಲು ಸೂಚಿಸಿದರು.

ತಾಜ ಬಾವಡಿಯ ಪುನಃಶ್ಚೇತನ ಕಾಮಗಾರಿಯನ್ನು ಪೂರ್ಣಗೊಳಿಸಲು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಶಿವಾಜಿ ವೃತ್ತದ ಹತ್ತಿರುವ ಇರುವ ಕಂದಕವನ್ನು ಹಾಗೂ ಬೇಗಂ ತಬ್ ಅಭಿವೃದ್ಧಿಪಡಿಸಲು ಮಹಾನಗರ ಪಾಲಿಕೆಯ ಮಹಾಪೌರರು ಹಾಕಿಕೊಂಡಿರುವ ಕಾಮಗಾರಿಯ ಯೋಜನೆಗಳನ್ನು ಪೂರ್ಣಗೊಳಿಸಬೇಕು. ಸೋಲ್ಲಾಪುರ ರಸ್ತೆಯಲ್ಲಿರುವ ಕಬ್ರಸ್ತಾನ ತಡೆಗೋಡೆ ಕಾಮಗಾರಿಗಳನ್ನು ತುರ್ತಾಗಿ ಪೂರ್ಣಗೊಳಿಸಲು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಹಾಗೂ ವಿವಿಧ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net