

ವಿಜಯವಾಣಿ ಸುದ್ದಿಜಾಲ ಸುಳ್ಯ
ಪೆರುವಾಜೆ ಮತ್ತು ಕೊಡಿಯಾಲ ಗ್ರಾಮಕ್ಕೆ ಸಂಬಂಧಿಸಿದ ಸಾರಕೆರೆ ಎಂಬಲ್ಲಿ ಗೌರಿ ಹೊಳೆಗೆ 40 ವರ್ಷದ ಹಿಂದೆ ನಿರ್ಮಿಸಲಾದ ಕಿಂಡಿ ಅಣೆಕಟ್ಟು ಶಿಥಿಲಗೊಂಡಿದ್ದು, ಸ್ಥಳಕ್ಕೆ ತಹಸೀಲ್ದಾರ್ ಮಂಜುನಾಥ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಅವರು ಶನಿವಾರ ಭೇಟಿ ನೀಡಿ ಅಗತ್ಯ ಸೂಚನೆಗಳನ್ನು ನೀಡಿದರು.
ಇತ್ತೀಚೆಗೆ ಸುರಿದ ಮಳೆಗೆ ಹೊಳೆಯಲ್ಲಿ ನೀರು ತುಂಬಿ ಹರಿದು ಮರದ ದಿಣ್ಣೆಗಳು ಮತ್ತು ಕಸ ಕಡ್ಡಿಗಳು ಕೊಚ್ಚಿಕೊಂಡು ಬಂದು ಅಣೆಕಟ್ಟಿನ ಪಿಲ್ಲರ್‌ಗಳಿಗೆ ಬಡಿದಿದೆ. ಹೊಳೆಯ ಮತ್ತೊಂದು ಭಾಗದಲ್ಲಿ ಸುಮಾರು 100ಕ್ಕೂ ಮನೆಗಳಿದ್ದು ಕಿಂಡಿ ಅಣೆಕಟ್ಟಿನ ಮೇಲೆ ನಡೆದುಕೊಂಡು ಹೋಗಬೇಕಾಗಿದೆ. ಶಾಲೆಗೆ ಹೋಗುವ ವಿದ್ಯಾರ್ಥಿಗಳು ಹಾಗೂ ಇನ್ನಿತರ ಕೆಲಸ ಕಾರ್ಯಗಳಿಗೆ ಬೆಳ್ಳಾರೆ ಬರುವ ಸಾರ್ವಜನಿಕರು ಇದರ ಮೇಲಿನಿಂದ ನಡೆದುಕೊಂಡು ಬರಬೇಕು. ಅಣೆಕಟ್ಟಿನ ಮೇಲ್ಬಾಗದ ಸ್ಲಾೃಬ್‌ಗಳು ಅಲುಗಾಡುತ್ತಿವೆ. ಮಳೆಗಾಲದಲ್ಲಿ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಈಗಾಗಲೇ ಪಂಚಾಯಿತಿ ವತಿಯಿಂದ ಎರಡು ಬದಿಯಲ್ಲಿ ಅಣೆಕಟ್ಟಿನ ಮೇಲೆ ಸಂಚರಿಸದಂತೆ ಎಚ್ಚರಿಕೆ ಬ್ಯಾನರ್ ಅಳವಡಿಸಲಾಗಿದೆ.
ಶನಿವಾರ ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಮಂಜುನಾಥ ಹಾಗೂ ಇ.ಒ.ರಾಜಣ್ಣ ಅವರು ಅಣೆಕಟ್ಟಿನಲ್ಲಿ ಸಿಕ್ಕಿ ಹಾಕಿಕೊಂಡ ಮರದ ದಿಣ್ಣೆಗಳನ್ನು ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು. ಸ್ಪ್ಯಾಬ್ ತುಂಡಾಗಿರುವ ಭಾಗದಲ್ಲಿ ತಾತ್ಕಾಲಿಕವಾಗಿ ಅಡಕೆ ಮರಗಳನ್ನು ಹಾಕಿ ನಡೆದುಕೊಂಡುಹೋಗಲು ವ್ಯವಸ್ಥೆ ಮಾಡುವುದು. ವಿಪರೀತ ನೀರಿನ ಹರಿವು ಇರುವ ಸಂದರ್ಭದಲ್ಲಿ ಸಂಚಾರ ನಿಷೇಧಿಸಬೇಕು ಎಂದು ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು.