

ಹೊಳೆನರಸೀಪುರ: ಪಟ್ಟಣದ ಕವರ್ ಡೆಕ್ ಮಾರುಕಟ್ಟೆ ಬಳಿ ನಿರ್ಮಿಸಿರುವ ಯೋಗ ಭವನದ ಛಾವಣಿಯನ್ನು ಪುರಸಭೆ ಮುಖ್ಯಾಧಿಕಾರಿ ನಾಗೇಂದ್ರಕುಮಾರ್ ಪರಿಶೀಲಿಸಿದರು.
ಕಳೆದ ಹತ್ತಾರು ವರ್ಷಗಳ ಹಿಂದೆ ನಿರ್ಮಿಸಿರುವ ಈ ಕಟ್ಟಡದಲ್ಲಿ ಪಟ್ಟಣದ ಯೋಗಪಟುಗಳಿಗೆ ನಿತ್ಯ ಯೋಗಾಸನ ನಡೆಸಲು ಅವಕಾಶ ದೊರಕಿದೆ. ಇದೀಗ ಈ ಕಟ್ಟಡದ ಮೇಲ್ಭಾಗ ಶಿಥಿಲವಾಗಿರುವ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿ ನೀರು ಸೋರುತ್ತಿತ್ತು. ಹೀಗಾಗಿ ಇತ್ತೀಚೆಗೆ ನಡೆದ ಶಾಸಕ ಎಚ್.ಡಿ.ರೇವಣ್ಣ ಅವರ ನೇತೃತ್ವದಲ್ಲಿ ನಡೆದ ಪುರಸಭೆಯ ಮಾಸಿಕ ಸಭೆಯಲ್ಲಿ ಯೋಗಭವನದ ದುರಸ್ತಿಗೊಳಿಸಲು ತೀರ್ಮಾನಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಾಧಿಕಾರಿ ನಾಗೇಂದ್ರಕುಮಾರ್ ಯೋಗ ಭವನ ಪರಿಶೀಲನೆ ನಡೆಸಿದರು.
ಯೋಗ ಶಿಕ್ಷಕರಾದ ಪ್ರೇಮಾ ಮಂಜುನಾಥ್, ಎಂ.ಪಿ.ದಿನೇಶ್, ಆರ್.ವಾಸುದೇವಮೂರ್ತಿ, ಲೋಕೇಶ್, ಶಾಸಕ ರೇವಣ್ಣ ಅವರ ಆಪ್ತ ಸಹಾಯಕ ರವಿ, ಮಂಜುನಾಥ್ ಮತ್ತಿತರರು ಇದ್ದರು.