ಸುಗಮ ಸಂಚಾರಕ್ಕೆ ಶೀಘ್ರ ಕ್ರಮ: ದ.ಕ.ಡಿಸಿ ಮುಲ್ಲೈ ಮುಗಿಲನ್ ಸೂಚನೆ

punjalkatte
ಕೆಸರುಮಯವಾದ ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಪರಿಶೀಲನೆ ನಡೆಸಿದರು. ಗುತ್ತಿಗೆದಾರ ಸಂಸ್ಥೆಯ ಅಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಶಿವಪ್ರಸಾದ್ ಅಜಿಲ ಇದ್ದರು.c
Published on

ಬಂಟ್ವಾಳ: ಮಳೆಯಿಂದ ರಸ್ತೆಯೆಲ್ಲ ಕೆಸರುಮಯವಾಗಿ ಸಂಚಾರ ಅಸ್ತವ್ಯಸ್ತಗೊಂಡ ಹಿನ್ನೆಲೆಯಲ್ಲಿ ಪುಂಜಾಲಕಟ್ಟೆಗೆ ಭೇಟಿ ನೀಡಿದ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಶೀಘ್ರ ಕ್ರಮ ಕೈಗೊಳ್ಳುವಂತೆ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ಡಿ.ಪಿ.ಜೈನ್ ಸಂಸ್ಥೆ ಅಧಿಕಾರಿಗಳು ಮತ್ತು ಇಲಾಖೆ ಅಭಿಯಂತರರಿಗೆ ಸೂಚಿಸಿದರು.

ಪ್ರಸ್ತುತ ಹೆದ್ದಾರಿ ವಿಸ್ತರಣೆ ನೆಪದಲ್ಲಿ ರಸ್ತೆ ಅಗೆದು ಹಾಕಿದ್ದು, ನೀರು ಹರಿಯುವ ಸ್ಥಳ ಎತ್ತರ ಪ್ರದೇಶದಲ್ಲಿದೆ. ಇದರಿಂದ ಅಂಗಡಿ ಮುಂಗಟ್ಟುಗಳ ಬಾಗಿಲಿಗೆ, ನೀರು ನಿಲ್ಲುವಂತಾಗಿದೆ. ಇದನ್ನು ಸರಿಪಡಿಸಿಕೊಡುವಂತೆ ವರ್ತಕರು ಮನವಿ ಸಲ್ಲಿಸಿದರು.

ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ರೂಪುರೇಷೆಗಳನ್ನು ಪರಿಶೀಲಿಸಿ ಜನರಿಗೆ ತೊಂದರೆಯಾಗದಂತೆ ಕಾಮಗಾರಿ ನಡೆಸಿ ಎಂದು ಗುತ್ತಿಗೆದಾರರಿಗೆ ಜಿಲ್ಲಾಧಿಕಾರಿ ತಾಕೀತು ಮಾಡಿದರು.

ಗುತ್ತಿಗೆದಾರ ಸಂಸ್ಥೆಯ ಅಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಶಿವಪ್ರಸಾದ್ ಅಜಿಲ, ಬೆಳ್ತಂಗಡಿ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತಿತರರು ಇದ್ದರು.

ಕೆಸರುಮಯ ರಸ್ತೆ

ರಾಷ್ಟ್ರೀಯ ಹೆದ್ದಾರಿ 73ರ ಅಭಿವೃದ್ಧಿ ಕಾಮಗಾರಿ ಪುಂಜಾಲಕಟ್ಟೆಯಿಂದ ಚಾರ್ಮಾಡಿವರೆಗೆ ನಡೆಯುತ್ತಿದ್ದು, ಪುಂಜಾಲಕಟ್ಟೆ ಭಾಗದಲ್ಲಿ ರಸ್ತೆ ಕೆಸರುಮಯವಾಗಿ ಸಂಚಾರ ದುಸ್ತರವಾಗಿದೆ. ರಸ್ತೆ ಜಾರುತ್ತಿರುವುದರಿಂದ ಅಪಾಯಕಾರಿಯಾಗಿ ಪರಿಣಮಿಸಿದೆ.

ಕುಕ್ಕಳ ಗ್ರಾಮದ ಪುಂಜಾಲಕಟ್ಟೆ, ಬಸವನಗುಡಿ ಪ್ರದೇಶದಿಂದ ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗೆ ಹೋಗುವ ಸಂಪರ್ಕ ರಸ್ತೆ ಬಳಿ ಹೆದ್ದಾರಿ ವಿಸ್ತರಣೆಗಾಗಿ ಅಗೆಯಲಾಗಿದೆ. ದ್ವಿಪಥ ರಸ್ತೆಯ ಒಂದು ಭಾಗವನ್ನು ಅಗೆದು ತೆಗೆದುದರಿಂದ ಆಳವಾಗಿದ್ದು, ರಸ್ತೆಯ ಇನ್ನೊಂದು ಭಾಗದಿಂದ ಪ್ರಯಾಣಿಸುವವರು ಜಾಗರೂಕರಾಗಿ ನಿಧಾನವಾಗಿ ಪ್ರಯಾಣಿಸಬೇಕಾಗಿದೆ. ತಪ್ಪಿದಲ್ಲಿ ವಾಹನ ಸಹಿತ ಆಳಕ್ಕೆ ಬೀಳುವ ಅಪಾಯವಿದೆ. ಮಳೆಯಿಂದಾಗಿ ರಸ್ತೆ ಅಗೆತದಿಂದ ಮಣ್ಣು ರಸ್ತೆಯುದ್ದಕ್ಕೂ ಹರಡಿದೆ. ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಎಲ್ ಕೆಜಿಯಿಂದ ಪಿಯುಸಿ ವರೆಗೆ ವಿದ್ಯಾರ್ಥಿಗಳಿದ್ದು, ಹೆಚ್ಚಿನವರು ನಡೆದುಕೊಂಡು ಬರುವವರಿದ್ದಾರೆ. ಆದರೆ ರಸ್ತೆ ಕೆಸರುಮಯವಾದುದರಿಂದ ವಿದ್ಯಾರ್ಥಿಗಳಿಗೆ ನಡೆದಾಡಲೂ ಕಷ್ಟವಾಗಿದೆ. ಶಾಲೆಗೆ ತಿರುಗುವಲ್ಲಿ ರಸ್ತೆ ಅಗೆದಿದ್ದು ಆಳದಲ್ಲಿದೆ. ವಾಹನಗಳು ಶಾಲಾ ರಸ್ತೆಗೆ ತಿರುಗಲು ಹರಸಾಹಸ ಪಡಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net