

ಹನೂರು : ತಾಲೂಕಿನ ಮಲೆಮಹದೇಶ್ವರ ಬೆಟ್ಟ ತಾಳುಬೆಟ್ಟ ಮಾರ್ಗದ ರಂಗಸ್ವಾಮಿ ಒಡ್ಡುವಿನ ಬಳಿ ಬಾಯ್ತೆರೆದಿದ್ದ ಗುಂಡಿ ಹಾಗೂ ಅಲ್ಲಲ್ಲಿ ಹಾಳಾಗಿರುವ ತಡೆಗೋಡೆಯ ಸ್ಥಳಕ್ಕೆ ಬುಧವಾರ ಪಿಡಬ್ಲುೃಡಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಮ.ಬೆಟ್ಟಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಆದರೆ ಈ ಮಾರ್ಗದ ರಸ್ತೆಯ ಅಲ್ಲಲ್ಲಿ ಗುಂಡಿಗಳು ನಿರ್ಮಾಣವಾಗಿ ಹಾಳಾಗಿದೆ. ಇದರಿಂದ ವಾಹನ ಸಂಚಾರ ದುಸ್ಸಾಹಸವಾಗಿದೆ. ಹೀಗಿರುವಾಗ ಇತ್ತೀಚೆಗೆ ಆಗಾಗ್ಗೆ ಮಳೆ ಬೀಳುತ್ತಿರುವುರಿಂದ ರಂಗಸ್ವಾಮಿ ಒಡ್ಡುವಿನ ಬಳಿ ಗುಂಡಿಗಳು ಬಾಯ್ತೆರೆದು ನಿಂತಿವೆ. ಇದರಿಂದ ಹಲವು ದಿನಗಳವರೆಗೆ ನಿಲ್ಲುವಂತಾಗಿದ್ದು, ವಾಹನ ಸವಾರರು ಸಂಚರಿಸಲು ಪ್ರಯಾಸಪಡಬೇಕಿದೆ.
ಇನ್ನು ಈ ಮಾರ್ಗದಲ್ಲಿ ಸುರಕ್ಷತೆಯ ದೃಷ್ಟಿಯಿಂದ ತಡೆಗೋಡೆ ನಿರ್ಮಿಸಿ ಹಲವು ದಶಕಗಳೇ ಕಳೆದಿದ್ದು, ಅಲ್ಲಲ್ಲಿ ಹಾಳಾಗಿದೆ. ಇದರಿಂದ ವಾಹನ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ಕಟ್ಟಿಟ್ಟ ಬುತ್ತಿ. ಹೀಗಾಗಿ ವಾಹನ ಸವಾರರು ನಿತ್ಯ ಜೀವ ಭಯದಿಂದ ಸಂಚರಿಸಬೇಕಾದ ಪರಿಸ್ಥಿತಿ ಇದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಗುಂಡಿಯನ್ನು ಮುಚ್ಚಿಸುವುದರ ಜತೆಗೆ ತಡೆಗೋಡೆಯನ್ನು ರಿಪೇರಿ ಮಾಡಿಸುವಂತೆ ಭಕ್ತರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದರು.
ಈ ಹಿನ್ನೆಲೆ ಪಿಡಬ್ಲುೃಡಿ ಕಾರ್ಯನಿರ್ವಾಹಕ ಇಂಜಿನಿಯರ್ ಮಹೇಶ್, ಎಇಇ ಚಿನ್ನಣ್ಣ, ಎಇ ಮಹೇಶ್ ಹಾಗೂ ಸಿಬ್ಬಂದಿ ರಂಗಸ್ವಾಮಿ ಒಡ್ಡುವಿನ ಮುಂಭಾಗದಲ್ಲಿ ಗುಂಡಿ ಬಿದ್ದಿದ್ದ ರಸ್ತೆಯ ಬಳಿ ತೆರಳಿ ಪರಿಶೀಲನೆ ನಡೆಸಿದರು. ಬಳಿಕ ಜೆಸಿಬಿ ಮೂಲಕ ಕಿರು ಸೇತುವೆಯಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯವನ್ನು ತೆರವುಗೊಳಿಸಿದರು.
ಈ ವೇಳೆ ಇಇ ಮಹೇಶ್ ವಿಜಯವಾಣಿಯೊಂದಿಗೆ ಮಾತನಾಡಿ, ಕಿರು ಸೇತುವೆಯಲ್ಲಿ ತ್ಯಾಜ್ಯ ಸಂಗ್ರಹವಾಗಿದ್ದ ಪರಿಣಾಮ ರಸ್ತೆಗೆ ನೀರು ಹರಿದು ಗುಂಡಿ ನಿರ್ಮಾಣವಾಗಿದೆ. ಕೂಡಲೇ ರಸ್ತೆ ದುರಸ್ತಿಗೆ ಕ್ರಮವಹಿಸಲಾಗುವುದು. ಜತೆಗೆ ತಡೆಗೋಡೆಗಳ ರಿಪೇರಿಗೂ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.