ನರೇಗಾ ಕಾಮಗಾರಿಗಳ ಪರಿಶೀಲನೆ

Inspection of Narega works
ವಿಜಯಪುರ ತಾಲೂಕಿನ ತಿಡಗುಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಯುಕ್ತ ಪವನ್​ ಕುಮಾರ್​ ಮಾಲಪಾಟಿ ಕಾಮಗಾರಿ ಪರಿಶೀಲಿಸಿದರು. ಸಿಇಒ ರಿಷಿ ಆನಂದ, ಉಪ ಕಾರ್ಯದರ್ಶಿ ವಿಜಯಕುಮಾರ ಆಜೂರ, ಇಒ ನಂದೀಪ ರಾಠೋಡ ಮತ್ತಿತರರಿದ್ದಾರೆ.
Published on

ವಿಜಯಪುರ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಇಲಾಖೆಯ ಆಯುಕ್ತ ಪವನ್​ ಕುಮಾರ್​ ಮಾಲಪಾಟಿ ಅವರು ಗುರುವಾರ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ನರೇಗಾ ಯೋಜನೆಯಡಿ ಕೈಗೊಂಡ ಕಾಮಗಾರಿಗಳ ಪರಿಶೀಲನೆ ನಡೆಸಿದರು.

ತಾಲೂಕಿನ ಭೂತನಾಳ ಗ್ರಾಮದ ನರ್ಸರಿ ಕಾಮಗಾರಿ ವೀಕ್ಷಣೆ, ಸಸಿಗಳನ್ನು ನಾಟಿ ಮಾಡಿರುವ ಕುರಿತು ಪರಿಶೀಲನೆ ನಡೆಸಿದ ಅವರು, ಪ್ರತಿ ದಿನಕ್ಕೆ ( ಬೆಳಗ್ಗೆ ಹಾಗೂ ಮಧ್ಯಾಹ್ನ ) ಎರಡು ಬಾರಿ ಎನ್​ಎಂಆರ್​ ಹಾಜರಾತಿಗೆ ಕ್ರಮ ವಹಿಸಲು ಮತ್ತು ಮುಂದಿನ ಮೂರು ವರ್ಷಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆ ಬದಿ ಗಿಡಗಳನ್ನು ನೆಡುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ತಿಡಗುಂದಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಅಡುಗೆ ಕೋಣೆ ಕಾಮಗಾರಿ ಪರಿಶೀಲಿಸಿ, ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು. ಉತ್ತಮ ಸಾಮಗ್ರಿಗಳನ್ನು ಬಳಸುವಂತೆ ತಿಳಿಸಿದರು.

ಡೊಮನಾಳ ಎಲ್​ಟಿ ನಂಬರ್​ 1ರಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಪಂಚಾಯತ್​ ರಾಜ್​ ಇಲಾಖೆಯಡಿ ಅನುಷ್ಠಾನಗೊಂಡ ಅಂಗನವಾಡಿ ಕೇಂದ್ರವನ್ನು ಪರಿಶೀಲಿಸಿ, ಕಾಮಗಾರಿ ಉತ್ತಮವಾಗಿ ಅನುಷ್ಠಾನವಾಗಿರುವದನ್ನು ಕಂಡು ಪ್ರಶಂಸೆ ವ್ಯಕ್ತಪಡಿಸಿದರು.

ಇಂಡಿ ತಾಲೂಕಿನ ಕೋಳುರಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾವಳಸಂಗ ಗ್ರಾಮದ ಅಮೃತ ಸರೋವರ ಕಾಮಗಾರಿ ವೀಸಿ, ಅಮೃತ ಸರೋವರದ ಉಪಯೋಗ, ಸುತ್ತಳತೆ, ನೀರಿನ ಸಂಗ್ರಹ ಮಟ್ಟ, ಜಾನುವಾರುವಿಗೆ ಅನುಕೂಲವಾಗಿರುವುದು ಸೇರಿ ಇತರೆ ವಿಷಯಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ, ಚೆಕ್​ ಡ್ಯಾಂ ಗಳನ್ನು ನಿರ್ಮಿಸುವುದರ ಜೊತೆಗೆ ಕೆರೆ ತುಂಬುವ ಕೆಲಸವಾಗಬೇಕು ಹಾಗೂ ನರೇಗಾ ಯೋಜನೆಯ ಕಾಮಗಾರಿ ಕಡತಗಳನ್ನು ಕಡ್ಡಾಯವಾಗಿ ನಿಯಮಾನುಸಾರ ನಿರ್ವಹಣೆ ಮಾಡಬೇಕು ಎಂದು ಸೂಚಿಸಿದರು.

ಸಿಇಒ ರಿಷಿ ಆನಂದ, ಉಪ ಕಾರ್ಯದರ್ಶಿ ವಿಜಯಕುಮಾರ ಆಜೂರ, ಇಂಡಿ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ನಂದೀಪ ರಾಠೋಡ, ಚಡಚಣ ತಾಲೂಕಿನ ಕಾರ್ಯ ನಿರ್ವಾಹಕ ಅಧಿಕಾರಿ ಸಂಜಯ ಖಡಗೇಕರ, ಜಿಲ್ಲಾ ಪಂಚಾಯಿತಿಯ ಸಹಾಯಕ ಯೋಜನಾಧಿಕಾರಿ ಅರುಣ ಕುಮಾರ ದಳವಾಯಿ, ವಿಜಯಪುರ ತಾಲೂಕಿನ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಕಾಸಿಮಸಾಬ ಮಸಳಿ, ರಾಜ್ಯ ಆಯುಕ್ತಾಲಯದ ಅಭಿರಾಮ (ತಾಂತ್ರಿಕ ಸಂಯೋಜಕರು, ಸಿವಿಲ್​) ಹಾಗೂ ಆದರ್ಶ ಬಿಡಿ (ಎಂಐ ಎಸ್​), ಜಿಲ್ಲಾ ಪಂಚಾಯಿತಿಯ ಎಡಿಪಿಸಿ ಪ್ರಥ್ವಿರಾಜ್​ ಪಾಟೀಲ, ರಾಮಗೌಡ ಸರಬಡಗಿ, ವಿನೋದ ಸಜ್ಜನ, ಪಿಡಿಒ ಮಜುಳಾ ಂಟಿ, ಸಿದ್ದು ಲೋಣಿ ಮತ್ತಿತರರಿದ್ದರು.

ಪ್ರಗತಿ ಪರಿಶೀಲನಾ ಸಭೆ : ಗ್ರಾಮೀಣ ಜನರಿಗೆ ನರೇಗಾ ಯೋಜನೆಯಡಿ ನಿರಂತರವಾಗಿ ಉದ್ಯೋಗ ಒದಗಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಇಲಾಖೆ ಆಯುಕ್ತ ಪವನಕುಮಾರ ಮಾಲಪಾಟಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಪಂ ಸಭಾಂಗಣದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಸ್ತುತ ವರ್ಷ ಮುಕ್ತಾಯಗೊಳ್ಳಲು 4 ತಿಂಗಳು ಬಾಕಿ ಇದೆ. ಆದ್ದರಿಂದ ಬಾಕಿ ಉಳಿದ ಮಾನವ ದಿನಗಳನ್ನು ಗ್ರಾಮ ಪಂಚಾಯಿತಿ ಮತ್ತು ಅನುಷ್ಠಾನ ಇಲಾಖೆಗಳಾದ ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ, ಕೃಷಿ ಇಲಾಖೆಗಳಿಂದ ನಿಗದಿಪಡಿಸಿದ ಕಾಲದಲ್ಲಿ ಮಾನವ ದಿನಗಳನ್ನು ಸೃಜನೆ ಮಾಡಬೇಕು. ಇದಕ್ಕೆ ಪೂರಕವಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಸಾರ್ವಜನಿಕರಿಗೆ ನರೇಗಾ ಯೋಜನೆಯ ಕುರಿತು ಗೃತಿ ಮೂಡಿಸಬೇಕು. ನಿರಂತರವಾಗಿ ಕೂಲಿಕಾರರಿಗೆ ಉದ್ಯೋಗ ಒದಗಿಸಬೇಕು ಎಂದರು.

2022&23ನೇ ಸಾಲಿನಿಂದ 2024&25ನೇ ಸಾಲಿನವರೆಗೆ ಪೂರ್ಣಗೊಳ್ಳದೇ ಇರುವ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಬೇಕು. ನರೇಗಾ ಕಾಮಗಾರಿಗಳ ಪೂರ್ವ ಹಂತ, ಪ್ರಗತಿ ಹಂತ ಹಾಗೂ ಮುಕ್ತಾಯವಾದ ಕಾಮಗಾರಿಗಳನ್ನು ಜಿಯೋ ಟ್ಯಾಗ್​ ಮಾಡುವ ಕಾರ್ಯವನ್ನು ಪ್ರಗತಿ ಸಾಧಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net