

ಮಂಡ್ಯ: ಸರ್ಕಾರಿ ಸ್ವಾಮ್ಯದ ಮೈಶುಗರ್ ಕಾರ್ಖಾನೆಗೆ ಸಂಬಂಧಿಸಿದಂತೆ ಆಸ್ತಿಗಳನ್ನು ಕೆಲವರು ಅತಿಕ್ರಮಣ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ತಾಲೂಕಿನ ಹಲ್ಲೇಗೆರೆ ಗ್ರಾಮಕ್ಕೆ ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೈಷುಗರ್ ಕಾರ್ಖಾನೆಗೆ ಸೇರಿದ ಅಪಾರ ಪ್ರಮಾಣದ ಆಸ್ತಿ ಇದೆ. ಆದರೆ ನಿರ್ವಹಣೆ ಮಾಡದ ಹಾಗೂ ಗಮನಹರಿಸದ ಪರಿಣಾಮ ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳಿಂದ ಪರಿಶೀಲನೆ ನಡೆಸಿ ಅನಧಿಕೃತವಾಗಿ ಆಸ್ತಿ ದುರ್ಬಳಕೆ ಮಾಡಿಕೊಂಡರೆ ಕ್ರಮ ತೆಗೆದುಕೊಂಡು ಮತ್ತೆ ಕಾರ್ಖಾನೆ ಸುಪರ್ದಿಗೆ ಪಡೆಯಲು ಯೋಜನೆ ರೂಪಿಸಲಾಗಿದೆ. ಅದರಂತೆ ಗ್ರಾಮಕ್ಕೆ ಭೇಟಿ ನೀಡಲಾಯಿತು.
ಗ್ರಾಮದಲ್ಲಿ ಕಾರ್ಖಾನೆಗೆ ಸೇರಿದ 3 ಎಕರೆ 33 ಗುಂಟೆ ಜಮೀನಿದೆ. ಈ ಹಿಂದೆ ಸಾರ್ವಜನಿಕರ ಹಿತದೃಷ್ಟಿಯಿಂದ ಕಾರ್ಖಾನೆಯ ಜಾಗವನ್ನು ಆಸ್ಪತ್ರೆ, ಸಂತೆ ಮೈದಾನ, ಸರ್ಕಾರಿ ಶಾಲೆಗೆಂದು ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡಲಾಗಿತ್ತು. ಆದರೆ ಕೆಲವರು ಸುಮಾರು 15 ಗುಂಟೆಯಷ್ಟು ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದರು. ಜತೆಗೆ ಕಟ್ಟಡಗಳನ್ನ ನಿರ್ಮಿಸಿದ್ದರು. ಈ ಹಿನ್ನೆಲೆಯಲ್ಲಿ ಸಿ.ಡಿ.ಗಂಗಾಧರ ಭೇಟಿ ಕೊಟ್ಟು ಮಾಹಿತಿ ಪಡೆದುಕೊಂಡರು. ಅಂತೆಯೇ ಗ್ರಾಮ ಪಂಚಾಯಿತಿಯಲ್ಲಿಯೇ ದಾಖಲೆ ಪರಿಶೀಲಿಸಿ ಕ್ರಮ ವಹಿಸುವಂತೆ ಸೂಚನೆ ನೀಡಿದ್ದಾರೆ.
ಕಾರ್ಖಾನೆಯ ಅಧಿಕಾರಿ ಸ್ವಾಮಿಗೌಡ, ಆಪ್ತ ಸಹಾಯಕ ವಿನಾಯಕ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಎಂ.ಕೃಷ್ಣಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಾ ಜಯರಾಮೇಗೌಡ, ಉಪಾಧ್ಯಕ್ಷೆ ಭಾಗ್ಯಮ್ಮ ಪಾಪಯ್ಯ ಇತರರಿದ್ದರು.