ಮಳೆ ಆರಂಭಕ್ಕೂ ಮುನ್ನವೇ ಪೈಪ್‌ಲೈನ್ ಅಳವಡಿಸಿ: ಜಿಪಂ ಸಿಇಒ ಕೆ.ಆರ್.ನಂದಿನಿ ಸೂಚನೆ

Inspection of multi-village drinking water works Mandya
Published on

ಮಂಡ್ಯ: ಪಾಂಡವಪುರ, ಕೆ.ಆರ್.ಪೇಟೆ ಮತ್ತು ನಾಗಮಂಗಲ ತಾಲೂಕಿನ ಅಂದಾಜು 790 ಜನವಸತಿಗೆ ಕುಡಿಯುವ ನೀರು ಸರಬರಾಜು ಮಾಡುವ ಬಹುಗ್ರಾಮ ಕುಡಿಯುವ ನೀರಿನ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಸೂಚನೆ ನೀಡಿದರು.

ಯೋಜನೆಗೆ ಸಂಬಂಧಿಸಿದಂತೆ ಮೂರು ತಾಲೂಕಿನಲ್ಲಿ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಮಾನವ ಸಂಪನ್ಮೂಲ ಹಾಗೂ ಯಂತ್ರೋಪಕರಣಗಳ ಸಂಖ್ಯೆಯನ್ನು ಹೆಚ್ಚು ಮಾಡಬೇಕು. ಮುಖ್ಯವಾಗಿ ಮಳೆಗಾಲ ಆರಂಭಕ್ಕೂ ಮುನ್ನ ಪೈಪ್‌ಲೈನ್ ಅಳವಡಿಸಲು ಕ್ರಮ ವಹಿಸಬೇಕು. ಕಾಮಗಾರಿಗಳ ಗುಣಮಟ್ಟವನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು. ಅಂತೆಯೇ ಕಾಮಗಾರಿಗೆ ಅಗತ್ಯವಿರುವ ಭೂ ಮಂಜೂರಾತಿಯನ್ನು ತ್ವರಿತವಾಗಿ ಪಡೆಯಲು ಕ್ರಮವಹಿಸುವಂತೆ ತಿಳಿಸಿದರು.

790 ಜನವಸತಿಯ ಸಾರ್ವಜನಿಕರಿಗೆ ಕಾವೇರಿ ನದಿಯಿಂದ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರನ್ನು ಸರಬರಾಜು ಮಾಡಲು ಈ ಯೋಜನೆ ಸಹಕಾರಿಯಾಗಲಿದೆ. ಇದರಿಂದ ಬರಗಾಲದಂತಹ ಸನ್ನಿವೇಶಗಳಲ್ಲಿಯೂ ಸಮರ್ಪಕ ನೀರನ್ನು ಸಾರ್ವಜನಿಕರಿಗೆ ಸರಬರಾಜು ಮಾಡಲು ಸಾಧ್ಯ ಎಂದರು.

ಇದೇ ವೇಳೆ ಪಂಪ್‌ಹೌಸ್, ಜಾಕ್‌ವೆಲ್, ನೀರು ಶುದ್ಧೀಕರಣ ಘಟಕ, ಪೈಪ್ ಲೈನ್ ಕಾಮಗಾರಿ ಸೇರಿದಂತೆ ಇತರೆ ಕಾಮಗಾರಿ ವೀಕ್ಷಿಸಿದರು. ಎಲ್ ಆ್ಯಂಡ್ ಟಿ ಸಂಸ್ಥೆಯ ಅಧಿಕಾರಿಗಳು, ಸಿಬ್ಬಂದಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net