

ಗುಂಡ್ಲುಪೇಟೆ: ಹಲವಾರು ವರ್ಷಗಳಿಂದ ಹಾಳಾಗಿದ್ದ ಪಟ್ಟಣದ ಮಡಹಳ್ಳಿ ರಸ್ತೆಯ ನಿರ್ಮಾಣ ಕಾಮಗಾರಿಯನ್ನು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಗುರುವಾರ ಅಧಿಕಾರಿಗಳ ಜತೆ ಪರಿಶೀಲಿಸಿದರು.
ಮಡಹಳ್ಳಿ ರಸ್ತೆಯಲ್ಲಿ ಹೊಸದಾಗಿ ಚರಂಡಿ ನಿರ್ಮಾಣ ಕಾಮಗಾರಿ ಕೈಗೊಂಡಿದ್ದರೂ ಕೆಲವರು ವಿನಾಕಾರಣ ಅಡ್ಡಿಪಡಿಸುತ್ತಿದ್ದ ಹಿನ್ನೆಲೆಯಲ್ಲಿ ಶಾಸಕರು ಖುದ್ದಾಗಿ ಭೇಟಿ ನೀಡಿ, ಸಾರ್ವಜನಿಕರಿಂದ ಮಾಹಿತಿ ಪಡೆದುಕೊಂಡರು. ಕೂಡಲೇ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರಿಗೆ ಕರೆ ಮಾಡಿ ಚರಂಡಿ ನಿರ್ಮಾಣ ಸಂದರ್ಭದಲ್ಲಿ ರಸ್ತೆಬದಿಯಲ್ಲಿರುವ ಯಾವ ಮನೆಗಳಿಗೂ ತೊಂದರೆಯಾಗಬಾರದು. ಮಳೆಗಾಲದಲ್ಲಿ ಪ್ರತಿ ಬಾರಿ ಮಳೆ ಬಿದ್ದಾಗಲೂ ಮಡಹಳ್ಳಿ ಸರ್ಕಲ್‌ನಲ್ಲಿ ಮಳೆನೀರು ನಿಂತು ಸಮಸ್ಯೆ ಎದುರಾಗುತ್ತಿದೆ. ಆದ್ದರಿಂದ ರಸ್ತೆಯ ಎರಡು ಬದಿಗಳಲ್ಲಿ ಚರಂಡಿ ನಿರ್ಮಿಸಿ ಮಳೆನೀರು ತಗ್ಗು ಪ್ರದೇಶಕ್ಕೆ ಹರಿದು ನಿಲ್ಲುವುದನ್ನು ತಡೆಗಟ್ಟಬೇಕು ಎಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಜಿ.ಎಸ್.ಮಧುಸೂದನ್, ಇಂಜಿನಿಯರ್ ಮಂಜುನಾಥ್ ಹಾಗೂ ಕಾಮಗಾರಿಯ ಗುತ್ತಿಗೆದಾರ ಹಾಗೂ ಬಡಾವಣೆಯ ನಿವಾಸಿಗಳು ಇದ್ದರು.