

ಮಂಡ್ಯ: ಎಂಬತ್ತೇಳನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಭೂತಪೂರ್ವ ಯಶಸ್ಸಿನ ನೆನಪಿಗೆ ‘ಕನ್ನಡ ಭವನ’ ನಿರ್ಮಾಣ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಘೋಷಣೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಸೂಕ್ತ ಜಾಗಕ್ಕೆ ಜಿಲ್ಲಾಡಳಿತದಿಂದ ಪರಿಶೀಲನೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ನಗರದೊಳಗೆಯೇ ಭವನ ಆಗಬೇಕೆನ್ನುವ ಸಲಹೆ ಕೇಳಿಬರುತ್ತಿದೆ.
ಮೂರು ದಶಕದ ಬಳಿಕ ಮಂಡ್ಯಕ್ಕೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯ ವಹಿಸಿಕೊಳ್ಳುವ ಅವಕಾಶ ಒಲಿದಿತ್ತು. ಹಿರಿಯ ಜಾನಪದ ತಜ್ಞ ಗೊ.ರು.ಚನ್ನಬಸಪ್ಪ ಅವರ ಸರ್ವಾಧ್ಯಕ್ಷತೆಯಲ್ಲಿ ನುಡಿಜಾತ್ರೆ ಮೇಳೈಸಿತು. ನಗರದ ಹೊರವಲಯದಲ್ಲಿ ಆಯೋಜನೆಗೊಂಡರೂ ಲಕ್ಷಾಂತರ ಜನರು ಆಗಮಿಸಿದರು. ಮೂರು ದಿನ ಅಕ್ಷರಜಾತ್ರೆ ಹೊಸ ದಾಖಲೆಯನ್ನು ಸೃಷ್ಠಿ ಮಾಡಿತು. ಇದರ ನೆನಪಿಗೆ ಭವನ ನಿರ್ಮಾಣ ಮಾಡಲಾಗುತ್ತಿದೆ.
ಭವನ ನಿರ್ಮಾಣ ಮಾಡುವ ಸಂಬಂಧಿಸಿದಂತೆ ಈಗಾಗಲೇ ಜಿಲ್ಲಾಡಳಿತ ಕೂಡ ಸಕ್ರಿಯಗೊಂಡಿದೆ. ಅದರಂತೆ ಸೂಕ್ತ ಜಾಗಕ್ಕೆ ಪರಿಶೀಲನೆ ನಡೆಯುತ್ತಿದೆ. ನಗರದ ಹೊರವಲಯದಲ್ಲಿನ ಚಿಕ್ಕಮಂಡ್ಯ ಸಮೀಪ 10 ಗುಂಟೆ ಜಾಗ ಗುರುತಿಸಲಾಗಿದೆ. ಜಿಲ್ಲಾಧಿಕಾರಿ ಡಾ.ಕುಮಾರ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗಿದೆ. ಆದರೆ ಹೊರವಲಯದಲ್ಲಿ ಭವನ ನಿರ್ಮಾಣ ಮಾಡುವುದು ಬೇಡ ಎನ್ನುವ ಸಲಹೆ ಕೇಳಿಬರುತ್ತಿದೆ.
ಕಸಾಪ ಕಚೇರಿ ನಿರ್ಮಿಸಲಾಗಿತ್ತು: ಮಂಡ್ಯದಲ್ಲಿ 1994ರಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆಂದು 42 ಲಕ್ಷ ರೂ ಸಂಗ್ರಹಿಸಲಾಗಿತ್ತು. ಅದರಲ್ಲಿ ಸಮ್ಮೇಳನಕ್ಕೆ 22 ಲಕ್ಷ ರೂ ವ್ಯಯಿಸಲಾಗಿತ್ತು. ಇನ್ನುಳಿದ 20 ಲಕ್ಷ ರೂನಲ್ಲಿ ನಗರಸಭೆಯಿಂದ ಉಚಿತವಾಗಿ ದೊರೆತ ನಿವೇಶನದಲ್ಲಿ 6.25 ಲಕ್ಷ ರೂ ಖರ್ಚು ಮಾಡಿ ಕಸಾಪ ಕಚೇರಿಗೆ ಕಟ್ಟಡ ನಿರ್ಮಿಸಲಾಯಿತು. ಅಂತೆಯೇ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರ ನಿರ್ಮಾಣಕ್ಕೆ 8.25 ಲಕ್ಷ ರೂ, ಕುವೆಂಪು ಪ್ರತಿಮೆ ಸ್ಥಾಪನೆಗೆ 4 ಲಕ್ಷ ರೂ, ಜಾನಪದ ಲೋಕಕ್ಕೆ 1 ಲಕ್ಷ ರೂ ನೀಡಲಾಗಿತ್ತು.
87ನೇ ನುಡಿಜಾತ್ರೆಗೆ ರಾಜ್ಯಸರ್ಕಾರದಿಂದ 25 ಕೋಟಿ ರೂ ಅನುದಾನ ನೀಡಲಾಗಿದೆ. ಜಿಲ್ಲೆಯ ಸರ್ಕಾರಿ ನೌಕರರು ತಮ್ಮ ಒಂದು ದಿನದ ವೇತನವನ್ನು ನೀಡಿರುವುದರಿಂದ ಅಂದಾಜು ನಾಲ್ಕು ಕೋಟಿ ರೂ ಆಗಿರಬಹುದು. ಈ ಹಿನ್ನೆಲೆಯಲ್ಲಿ ಸಮ್ಮೇಳನಕ್ಕೆ ವ್ಯಯಿಸಿ ಉಳಿದ ಹಣವನ್ನು ಬಳಸಿ ಮಂಡ್ಯದಲ್ಲಿ ಭವನ ನಿರ್ಮಾಣ ಮಾಡಬೇಕೆನ್ನುವ ಆಗ್ರಹವಿತ್ತು. ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ಸಚಿವ ಚಲುವರಾಯಸ್ವಾಮಿ, ಭವನ ನಿರ್ಮಾಣ ಮಾಡಲಾಗುವುದು. ಇದಕ್ಕೆ ಅಗತ್ಯವಿರುವ ಅನುದಾನವನ್ನು ಸರ್ಕಾರದಿಂದ ಕೊಡಿಸುವುದಾಗಿ ತಿಳಿಸಿದ್ದಾರೆ.