

ಹನೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ತಹಸೀಲ್ದಾರ್ ವೈ.ಕೆ ಗುರುಪ್ರಸಾದ್ ಮತಗಟ್ಟೆಗಳಿಗೆ ತೆರಳಿ ಮೂಲ ಸೌಕರ್ಯ ಸಂಬಂಧ ಪರಿಶೀಲನೆ ನಡೆಸಿದರು.
ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಗೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 254 ಮತಗಟ್ಟೆಗಳಿದ್ದು, ಜಿಲ್ಲಾಧಿಕಾರಿ ಆದೇಶ ಮೇರೆಗೆ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನಾ ಕಾರ್ಯ ಆರಂಭಿಸಲಾಗಿದೆ. ಕಟ್ಟಡದ ಸುಸ್ಥಿತಿ, ವಿದ್ಯುತ್, ಕುಡಿಯುವ ನೀರು, ವಿದ್ಯುತ್ ಹಾಗೂ ಇಳಿಜಾರು ನಿರ್ಮಾಣ ಸೇರಿದಂತೆ ಇತರ ಅಗತ್ಯ ಮೂಲ ಸೌಕರ್ಯಗಳ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಸೌಕರ್ಯ ಕೊರತೆ ಇರುವ ಮತಗಟ್ಟೆಗಳಿಗೆ ಸೌಲಭ್ಯ ಒದಗಿಸಲು ಕ್ರಮವಹಿಸಲಾಗುವುದು. ಜತೆಗೆ ಹೆಚ್ಚು ಮತದಾರರಿರುವ ಮತಗಟ್ಟೆಯಲ್ಲಿ ಮತದಾನದ ಅನುಕೂಲತೆ ದೃಷ್ಟಿಯಿಂದ ಉಪ ಮತಗಟ್ಟೆ ತೆರೆಯಲಾಗುವುದು ಎಂದು ತಿಳಿಸಿದರು.
ಗ್ರಾಮ ಆಡಳಿತಾಧಿಕಾರಿ ಶೇಷಣ್ಣ, ಮುಖ್ಯಶಿಕ್ಷಕಿ ಪುಷ್ಪಲತಾ, ಶಿಕ್ಷಕರಾದ ಮಹದೇವಸ್ವಾಮಿ, ಧರ್ಮಲಿಂಗಂ ಇತರರು ಇದ್ದರು.