ನಗರಸಭಾ ಸದಸ್ಯರಿಂದ ಇಂದಿರಾ ಕ್ಯಾಂಟೀನ್ ಪರಿಶೀಲನೆ

8 ckm 4
ಚಿಕ್ಕಮಗಳೂರಿನ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿದ ನಗರಸಭೆ ನಾಮಿನಿ ಸದಸ್ಯರು ಅಲ್ಲಿನ ವ್ಯವಸ್ಥೆಯ ಪರಿಶೀಲನೆ ನಡೆಸಿದರು. ಕೀರ್ತಿಶೇಟ್, ವಾಸೀಮ್ ಪಾಷ, ಪ್ರಕಾಶ್ ರೈ, ತಬ್ರೇಜ್, ಸುರೇಶ್ ಇದ್ದರು.
Published on

ಚಿಕ್ಕಮಗಳೂರು: ನಗರದ ಹೃದಯ ಭಾಗದಲ್ಲಿ ಇಂದಿರಾ ಕ್ಯಾಂಟೀನ್ ಸೌಕರ್ಯ ವ್ಯವಸ್ಥೆಯನ್ನು ನಗರಸಭಾ ನಾಮಿನಿ ಸದಸ್ಯರುಗಳು ಬುಧವಾರ ಭೇಟಿ ನೀಡಿ ಕ್ಯಾಂಟೀನ್ ಒಳಾಂಗಣವನ್ನು ಪರಿಶೀಲನೆ ನಡೆಸಿ ಕುಂದುಕೊರತೆಗಳಿದ್ದಲ್ಲಿ ತಿಳಿಸುವಂತೆ ಕ್ಯಾಂಟೀನ್ ವ್ಯವಸ್ಥಾಪಕರಿಗೆ ಸೂಚಿಸಿದರು.

ಈ ವೇಳೆ ಮಾತನಾಡಿದ ನಗರಸಭಾ ನಾಮಿನಿ ಸದಸ್ಯ ಕೀರ್ತಿಶೇಟ್, ಕ್ಯಾಂಟೀನ್‌ಗೆ ಆಗಮಿಸುವ ಸಾರ್ವಜನಿಕರನ್ನು ವಿಚಾರಿಸಿದಾಗ ಗುಣಮಟ್ಟತೆ ಹಾಗೂ ಸ್ವಚ್ಚತೆಯಿಂದ ಆಹಾರವನ್ನು ಪೂರೈಸಲಾಗುತ್ತಿದೆ. ಯಾವುದೇ ಸಮಸ್ಯೆಗಳಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ ಎಂದು ಹೇಳಿದರು.
ನಾವೂ ಸಹ ಇಂದಿರಾ ಕ್ಯಾಂಟೀನ್ ಅಡುಗೆ ಕೋಣೆಯೊಳಗೆ ಪರಿಶೀಲನೆ ನಡೆಸಿದ್ದು, ಸ್ವಚ್ಛತೆ ಕಂಡು ಬಂದಿದೆ. ಕ್ಯಾಂಟೀನ್ ಅಕ್ಕ ಪಕ್ಕ ಸ್ವಲ್ಪಮಟಿಗೆ ಕಸ ಬಿದ್ದಿದ್ದನ್ನು ಹೊರತುಪಡಿಸಿ ಬೇರೆ ಯಾವುದೇ ಸಮಸ್ಯೆಗಳಲ್ಲಿ. ಶೀಘ್ರದಲ್ಲೇ ನಗರಸಭೆ ಆಯುಕ್ತರ ಗಮನಕ್ಕೆ ಈ ವಿಷತ ತರುವ ಮೂಲಕ ಕ್ಯಾಂಟೀನ್‌ಗೆ ಅವಶ್ಯವಿರುವ ಸೌಕರ್ಯ ಒದಗಿಸುತ್ತೇವೆ ಎಂದು ಭರವಸೆ ನೀಡಿದರು.
ಬಡವರೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಕ್ಯಾಂಟೀನ್‌ನಲ್ಲಿ ಗುಣಮಟ್ಟತೆ ಹಾಗೂ ಸ್ವಚ್ಚತೆಯಿಂದ ಆಹಾರ ಪೂರೈಸಲು ಮೊದಲ ಆದ್ಯತೆ ನೀಡಬೇಕು. ವಿಪರೀತ ಮಳೆಯಿಂದ ಅನೇಕ ರೋಗ ರುಜಿನಿಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಕುಡಿಯಲು ಬಿಸಿನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಕ್ಯಾಂಟೀನ್ ವ್ಯವಸ್ಥಾಪಕರಿಗೆ ಸೂಚಿಸಿದರು.
ಸದಸ್ಯ ವಾಸೀಮ್ ಪಾಷ ಮಾತನಾಡಿ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಡವ, ಮಧ್ಯಮ ವರ್ಗದವರಿಗೆ ಅನುಕೂಲವಾಗಲೆಂದು ರಿಯಾಯಿತಿ ದರದಲ್ಲಿ ಇಂದಿರಾ ಕ್ಯಾಂಟೀನ್ ರಾಜ್ಯದ ವಿವಿಧ ಮೂಲೆಗಳಲ್ಲಿ ಸ್ಥಾಪಿಸಿರುವ ಪರಿಣಾಮ ಲಕ್ಷಾಂತರ ಮಂದಿ ಪ್ರತಿನಿತ್ಯ ಆಹಾರ ಸೇವಿಸಿ ಸಿದ್ದರಾಮಯ್ಯರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ನಗರಸಭಾ ನಾಮಿನಿ ಸದಸ್ಯರಾದ ಪ್ರಕಾಶ್ ರೈ, ತಬ್ರೇಜ್, ಸುರೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net