

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆಯುತ್ತಿರುವ ಷಟ್ಪಥ ಕಾಮಗಾರಿಯನ್ವಯ ಸಂಬಂಧಪಟ್ಟ ಇಲಾಖೆ ಹಾಗೂ ಗುತ್ತಿಗೆದಾರರು ಕೈಗೊಂಡಿರುವ ಮುಂಗಾರು ಪೂರ್ವ ವಿಪತ್ತು ಸಿದ್ಧತೆ ಪರಿಶೀಲಿಸಲು ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಚೆಂಗಳದಿಂದ ಮಟ್ಟಲಾಯಿ ವರೆಗಿನ ಪ್ರದೇಶಗಳಿಗೆ ಭೇಟಿ ನೀಡಿದರು.
ಮಳೆಗಾಲದಲ್ಲಿ ಜಲಾವೃತವಾಗುವ ಹಾಗೂ ಭೂಕುಸಿತಕ್ಕೆ ಒಳಗಾಗುವ ಪ್ರದೇಶಗಳಿಗೆ ಭೇಟಿ ನೀಡಿ ಅವಲೋಕನ ನಡೆಸಿದರು. ಚೆಂಗಳ, ಚಟ್ಟಂಚಾಲ್, ಪೊಯಿನಾಚಿ, ಪುಲ್ಲೂರು ಸೇತುವೆ, ಚೆಮ್ಮಟ್ಟಂವಯಲ್, ಕಾರ್ಯಂಗೋಡ್ ಸೇತುವೆ, ವೀರಮಲಗುಡ್ಡೆ ಮತ್ತು ಮಟ್ಟಲಾಯಿ ಗುಡ್ಡದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಜಿಲ್ಲಾಧಿಕಾರಿ ಪರಿಶೀಲಿಸಿದರು.
ಚೆರ್ಕಳ ಪೇಟೆ ಸಣ್ಣ ಮಳೆಗೂ ಹೊಳೆಯಂತಾಗುತ್ತಿದ್ದು, ಮೇಲ್ಸೇತುವೆ ಕಾಮಗಾರಿಯಿಂದ ರಸ್ತೆಯಲ್ಲಿ ನೀರು ನಿಲ್ಲದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ನೀರು ಹರಿಯುವ ನಾಲೆಗಳ ಕಾಮಗಾರಿ ಪೂರ್ಣಗೊಳಿಸಿ ಪ್ರಸ್ತುತ ದಾಸ್ತಾನುಗೊಳ್ಳುತ್ತಿರುವ ನೀರು ಹರಿದುಬಿಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಮೇಲ್ಸೇತುವೆ ಕಾಮಗಾರಿ ಶೀಘ್ರ ಪೂರ್ತಿಗೊಳಿಸಿ ಮಳೆ ನೀರನ್ನು ಚರಂಡಿ ಮೂಲಕ ಹರಿಯುವಂತೆ ಮಾಡಿ, ಸಂಚಾರಯೋಗ್ಯಗೊಳಿಸಲಾಗುವುದು ಎಂದು ಗುತ್ತಿಗೆದಾರರು ಜಿಲ್ಲಾಧಿಕಾರಿಗೆ ಭರವಸೆ ನೀಡಿದರು.
ಚೆರ್ಕಳ ಪುಲಿಕುಂಡು ರಾಷ್ಟ್ರೀಯ ಹೆದ್ದಾರಿಯ ಹೊರವಲಯದಲ್ಲಿ ವಾಸಿಸುವ ಕೇಳುಮಣಿಯಾಣಿ ಅವರ ದೂರಿನ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ, ಕೇಳು ಮಣಿಯಾಣಿ ಕುಟುಂಬಕ್ಕೆ ಹಕ್ಕುಪತ್ರ ನೀಡುವಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚಿಸಲಾಗುವುದು. ಅಲ್ಲದೆ ಕಾಮಗಾರಿಯಿಂದ ಮುಚ್ಚಿದ ಬಾವಿಗೆ ಪರಿಹಾರ ನೀಡುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು. ದಕ್ಷಿಣದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ರಸ್ತೆ ಗುಂಡಿ ಬಿದ್ದಿರುವ ಎರಡು ಕುಟುಂಬಗಳ ದೂರನ್ನು ಪರಿಹರಿಸುವಂತೆ ಜಿಲ್ಲಾಧಿಕಾರಿ ಸಂಬಂಧಪಟ್ಟವರಿಗೆ ಸೂಚಿಸಿದರು. ಪೊಯಿನಾಚಿಯ ಕ್ಷೇತ್ರವೊಂದರ ಮುಂಭಾಗದಲ್ಲಿ ರಸ್ತೆ ನಿರ್ಮಾಣ ಮಾಡದಿರಲು ಹಾಗೂ ಇಲ್ಲಿ 9 ಮೀಟರ್ ವಿನ್ಯಾಸವನ್ನು ಬದಲಾಯಿಸುವ ಬಗ್ಗೆ ಗುತ್ತಿಗೆದಾರರ ಪ್ರತಿನಿಧಿಗಳು ಜಿಲ್ಲಾಧಿಕಾರಿಮನವಿ ಮಾಡಿದರು.