

ಮದ್ದೂರು: ತಾಲೂಕಿನ ಬೆಸಗರಹಳ್ಳಿ ಗ್ರಾಮ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಹೆಚ್ಚುವರಿ ಶಾಲಾ ಕೊಠಡಿಗಳು ಹಾಗೂ ಹೈಟೆಕ್ ಶೌಚಗೃಹದ ಕಾಮಗಾರಿಯನ್ನು ಶಾಸಕ ಕೆ.ಎಂ.ಉದಯ್ ಪರಿಶೀಲಿಸಿದರು.
ಬುಧವಾರ ಕೆಪಿಎಸ್ಸಿ ಶಾಲೆಗೆ ಡಿಢೀರ್ ಭೇಟಿ ನೀಡಿ ಕಾಮಗಾರಿಯ ಬಗ್ಗೆ ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ನಂತರ ಮಾತನಾಡಿದ ಅವರು, ಶಾಲಾ ಮಕ್ಕಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ 2 ಕೋಟಿ ರೂ. ವೆಚ್ಚದಲ್ಲಿ ಹೆಚ್ಚುರಿಯಾಗಿ 11 ಶಾಲಾ ಕೊಠಡಿಗಳು ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾಗಿ 2 ಹೈಟೆಕ್ ಶೌಚಗೃಹಗಳನ್ನು ನಿರ್ಮಾಣ ಮಾಡುತ್ತಿದ್ದು, ಶೀಘ್ರವಾಗಿ ಕಾಮಗಾರಿ ಮುಗಿದು ವಿದ್ಯಾರ್ಥಿಗಳ ಅನುಕೂಲಕ್ಕೆ ಅನುವು ಮಾಡಿಕೊಡಲಾಗುವುದು ಎಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂಬ ದೃಷ್ಟಿಯಿಂದ ಶಾಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುತ್ತಿದ್ದು ವಿದ್ಯಾರ್ಥಿಗಳು ಇದರ ಸದ್ಬಳಕೆ ಮಾಡಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕೆಂದು ತಿಳಿಸಿದರು.
ಪ್ರಾಂಶುಪಾಲ ಬಂಗಾರನಾಯಕ್, ಉಪ ಪ್ರಾಂಶುಪಾಲ ಚಲುವರಾಜು, ಎಸ್‌ಡಿಎಂಸಿ ಉಪಾಧ್ಯಕ್ಷ ಬಿ.ಎಸ್.ನಾಗರಾಜು, ಸದಸ್ಯರಾದ ಚೈತ್ರಾ, ಪ್ರತಿಮಾ, ಮಂಜುನಾಥ್ ಸೇರಿದಂತೆ ಇತರರು ಇದ್ದರು.