ಕೇಂದ್ರ ಜಲ ಶಕ್ತಿ ತಂಡದಿಂದ ಕುಡಿಯುವ ನೀರು-ನರೇಗಾ ಕಾಮಗಾರಿ ಪರಿಶೀಲನೆ

CENTREL TEAM VISIT VIJAYAPUR
ವಿಜಯಪುರ ತಾಲೂಕಿನ ಗ್ರಾಮೀಣ ಭಾಗದ ಕುಡಿಯುವ ನೀರಿನ ವ್ಯವಸ್ಥೆ ಕುರಿತು ಕೇಂದ್ರ ಜಲ ಶಕ್ತಿ ತಂಡದ ನೋಡಲ್ ಅಧಿಕಾರಿ ವಿವೇಕ ಕುಮಾರ ಶರ್ಮಾ ನೇತೃತ್ವದ ತಂಡ ಪರಿಶೀಲನೆ ನಡೆಸಿತು. ವಿಜ್ಞಾನಿ ಆಯುಷ ಕೇಶರ್ವಾಣಿ, ಕೆ. ಹೊಂಗಯ್ಯ, ಸಂಜಯ ಖಡಗೇಕರ ಮತ್ತಿತರರಿದ್ದಾರೆ.
Published on

ವಿಜಯಪುರ: ಗಣಿ ಸಚಿವಾಲಯದ ನಿರ್ದೇಶಕರು ಹಾಗೂ ಕೇಂದ್ರ ಜಲ ಶಕ್ತಿ ತಂಡದ ನೋಡಲ್ ಅಧಿಕಾರಿ ಮತ್ತು ವಿಜ್ಞಾನಿಗಳ ತಂಡ ಮಂಗಳವಾರ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಕುಡಿಯುವ ನೀರು ಹಾಗೂ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡ ಕಾಮಗಾರಿಗಳ ಬಗ್ಗೆ ಪರಿಶೀಲನೆ ನಡೆಸಿತು.

ಅಧಿಕಾರಿ ವಿವೇಕ ಕುಮಾರ ಶರ್ಮಾ ಮತ್ತು ವಿಜ್ಞಾನಿ ಆಯುಷ ಕೇಶರ್ವಾಣಿ ಅವರನ್ನೊಳಗೊಂಡ ತಂಡ ವಿಜಯಪುರ ತಾಲೂಕಿನ ಹೆಗಡಿಹಾಳ, ಐನಾಪುರ ಹಾಗೂ ಹಡಗಲಿ ಗ್ರಾಮ ಪಂಚಾಯಿತಿಗಳಿಗೆ ಭೇಟಿ ಪರಿಶೀಲನೆ ನಡೆಸಿತು.

ಹೆಗಡಿಹಾಳ ಗ್ರಾಮದ ಅಮೃತ ಸರೋವರ, ಬೋರ್‌ವೆಲ್ ಮರು ಪೂರಣ ಘಟಕ ಮತ್ತು ಶುದ್ಧ ಕುಡಿಯುವ ನೀರಿನ ಘಟಕ ಕಾಮಗಾರಿಗಳನ್ನು ಪರಿಶೀಲನೆ ಮಾಡಿದರು. ನಂತರ ಅಮೃತ ಸರೋವರ ಒಳಹರಿವು ಹಾಗೂ ಹೊರಹರಿವುಗಳ ಕುರಿತು ಅಲ್ಲಿನ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಬಳಿಕ ಐನಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆ ಬದಿ ಇರುವ ಬೋರ್‌ವೆಲ್ ಮರು ಪೂರಣ ಘಟಕ ಮತ್ತು ಸರ್ಕಾರಿ ಶಾಲಾ ಕಟ್ಟಡದ ಮಳೆ ನೀರು ಕೊಯ್ಲು ಘಟಕ ಕಾಮಗಾರಿಗಳನ್ನು ವೀಕ್ಷಣೆ ಮಾಡಿದರು. ಹಡಗಲಿ ಗ್ರಾಮದ ಸರ್ಕಾರಿ ಜಾಗೆಯಲ್ಲಿ ನಿರ್ಮಿಸಿರುವ ನೆಡು ತೋಪು, ಸಾಮಾಜಿಕ ಅರಣ್ಯ ಇಲಾಖೆಯ ನರ್ಸರಿ ಕಾಮಗಾರಿಗಳಿಗೆ ಭೇಟಿ ನೀಡಿ ಅಲ್ಲಿನ ಸಸಿಗಳಿಗೆ ಸಮಯಕ್ಕೆ ತಕ್ಕಂತೆ ನೀರು ಪೂರೈಸಿ ಗಿಡಗಳು ನಾಶವಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಹಡಗಲಿ ಕೆರೆಯಿಂದ ಹಡಗಲಿ ಎಲ್ಟಿ- 2ರ ಜನರಿಗೆ ನೀರು ಸರಬರಾಜಾಗುತ್ತಿರುವ ಕುರಿತು ಮಾಹಿತಿ ಪಡೆದ ಅಧಿಕಾರಿಗಳು, ತಾಂಡಾದ ಜನರೊಂದಿಗೆ ಕುಡಿಯುವ ನೀರಿನ ಕುರಿತು ಸಂವಾದ ನಡೆಸಿದರು. ಸಾರ್ವಜನಿಕರಿಗೆ ಸರಬಾರಾಜು ಆಗುವ ಕುಡಿಯುವ ನೀರಿನ ಗುಣಮಟ್ಟವನ್ನು ಕಡ್ಡಾಯವಾಗಿ ಪರಿಶೀಲಿಸಿ ಸರಬರಾಜು ಮಾಡಲು ಸ್ಥಳದಲ್ಲಿನ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರಸ್ತುತ ಬರಗಾಲ ಘೋಷಣೆಯಾಗಿರುವುದರಿಂದ ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಹಾಗೂ ಅನುಷ್ಠಾನ ಇಲಾಖೆಗಳ ಅಡಿಯಲ್ಲಿ ಹಮ್ಮಿಕೊಂಡಿರುವ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು. ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಎನ್‌ಆರ್‌ಎಂ ಕಾಮಗಾರಿಗಳಾದ ಕೆರೆ ಅಭಿವೃದ್ಧಿ, ಹೂಳೆತ್ತುವುದು, ಅಮೃತ ಸರೋವರ ಕಾಮಗಾರಿಗಳು, ನಾಲಾ, ಹಳ್ಳ ಹೂಳೆತ್ತುವುದು, ಕೃಷಿ ಹೊಂಡ, ಬದು ನಿರ್ಮಾಣ, ಅರಣ್ಯ ಇಲಾಖೆಯಡಿ ನೆಡುತೋಪು ನಿರ್ಮಾಣ, ತೋಟಗಾರಿಕೆ ಕಾಮಗಾರಿಗಳು, ಕೃಷಿ ಇಲಾಖೆ ಕಾಮಗಾರಿಗಳ ಅನುಷ್ಠಾನ ಕುರಿತು ಪ್ರಗತಿ ಪರಿಶೀಲನೆ ನಡೆಸಲಾಯಿತು.

ಜಿಲ್ಲಾಧಿಕಾರಿ ಟಿ.ಭೂಬಾಲನ್, ತಾಪಂ ಇಒ ಕೆ. ಹೊಂಗಯ್ಯ, ಸಂಜಯ ಖಡಗೇಕರ, ವೀರೇಶ ಹಿರೇಮಠ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net