ರಸ್ತೆ ಇಲ್ಲದ ದಲಿತರ ಜಮೀನು ಪರಿಶೀಲನೆ

9blrp3
Published on

ಬೇಲೂರು: ತಾಲೂಕಿನ ಅರೇಹಳ್ಳಿ ಹೋಬಳಿಯ ಶಿರಗುರ ಗ್ರಾಮದಲ್ಲಿ ಜಮೀನಿಗೆ ಹೋಗಲು ರಸ್ತೆ ಬಿಡಿಸಿಕೊಡುವಂತೆ ಎಸ್ಸಿ-ಎಸ್ಟಿ ಹಿತರಕ್ಷಣಾ ಸಮಿತಿ ಸಭೆಯಲ್ಲಿ ದಲಿತ ಮುಖಂಡರು ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಎಂ.ಮಮತಾ ಸೋಮವಾರ ಸಿಬ್ಬಂದಿಯೊಂದಿಗೆ ತೆರಳಿ ಸ್ಥಳ ಪರಿಶೀಲಿಸಿದರು.


ಬೇಲೂರಿನ ಅಂಬೇಡ್ಕರ್ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಎಸ್ಸಿ-ಎಸ್ಟಿ ಹಿತರಕ್ಷಣಾ ಸಮಿತಿ ಸಭೆಯಲ್ಲಿ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ)ಜಿಲ್ಲಾ ಪ್ರಧಾನ ಸಂಚಾಲಕ ಲಕ್ಷ್ಮಣ್, ಶಿರಗುರ ಗ್ರಾಮದಲ್ಲಿ ದಲಿತರು 15 ವರ್ಷಗಳಿಂದ ರಸ್ತೆ ಇಲ್ಲದ ಕಾರಣ ತಮ್ಮ ಜಮೀನುಗಳನ್ನು ಉಳುಮೆ ಮಾಡದೆ ಪಾಳು ಬಿಟ್ಟಿದ್ದು, ರಸ್ತೆ ಬಿಡಿಸಿಕೊಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮದ ಪಾಳು ಬಿದ್ದಿರುವ ಜಮೀನುಗಳಿಗೆ ತೆರಳಿ ಸಿಬ್ಬಂದಿ ಹಾಗೂ ಗ್ರಾಮಸ್ಥರೊಂದಿಗೆ ತಹಸೀಲ್ದಾರ್ ಪರಿಶೀಲಿಸಿದರು. ರಸ್ತೆ ಒತ್ತುವರಿ ಮಾಡಿರುವುದನ್ನು ಬಿಟ್ಟುಕೊಡುವಂತೆ ಸಂಬಂಧಿಸಿದವರಿಗೆ ತಾಕೀತು ಮಾಡಿದರು. ಅಲ್ಲದೆ, ಜಮೀನಿನ ದಾಖಲೆಗಳೊಂದಿಗೆ ಕಚೇರಿಗೆ ಬರುವಂತೆ ಸೂಚಿಸಿದರು.


ತಹಸೀಲ್ದಾರ್ ಎಂ.ಮಮತಾ ಮಾತನಾಡಿ, ದಲಿತರ ಜಮೀನುಗಳಿಗೆ ಈ ಹಿಂದೆ ದಾರಿ ಇತ್ತು. ಅದರಲ್ಲಿಯೇ ತಮ್ಮ ಜಮೀನುಗಳಿಗೆ ಓಡಾಡುತ್ತಿರುವುದಾಗಿ ದಲಿತರು ತಿಳಿಸಿದ್ದು, ಈಗ ಕೆಲವರು ರಸ್ತೆ ಒತ್ತುವರಿ ಮಾಡಿಕೊಂಡಿರುವುದು ತಿಳಿದುಬಂದಿದೆ. ಸಂಬಂಧಪಟ್ಟ ಜಮೀನಿನ ಮಾಲೀಕರಿಗೆ ಎಚ್ಚರಿಕೆ ನೀಡಿದ್ದು, ಜತೆಗೆ ಜಮೀನಿನ ದಾಖಲೆಗಳೊಂದಿಗೆ ಕಚೇರಿ ಬರಲು ತಿಳಿಸಿದ್ದೇನೆ. ದಾಖಲೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಅರೇಹಳ್ಳಿ ಹೋಬಳಿ ಗ್ರಾಮ ಲೆಕ್ಕಾಧಿಕಾರಿ ಭಾನುಪ್ರಕಾಶ್, ಶಿರಗುರ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net