ಉಪವಿಭಾಗಾಧಿಕಾರಿಯಿಂದ ಸ್ಮಶಾನ ಪರಿಶೀಲನೆ

ಉಪವಿಭಾಗಾಧಿಕಾರಿಯಿಂದ ಸ್ಮಶಾನ ಪರಿಶೀಲನೆ
Published on

ಹುಣಸೂರು: ಮೂಲಸೌಕರ್ಯಗಳ ಕೊರತೆಯಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ತಾಲೂಕಿನ ಕಟ್ಟೆಮಳಲವಾಡಿಯ ಪರಿಶಿಷ್ಟ ಜಾತಿಗೆ ಮೀಸಲಿರಿಸಿರುವ ಸ್ಮಶಾನಕ್ಕೆ ಉಪವಿಭಾಗಾಧಿಕಾರಿ ಮಹಮದ್ ಹ್ಯಾರಿಸ್ ಸುಮೇರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಂಗಳವಾರ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಸ್ಮಶಾನದ ದುಸ್ಥಿತಿಯ ಕುರಿತು ಮಾಹಿತಿ ನೀಡಿ ಮಾತನಾಡಿದ ಉಪವಿಭಾಗ ಮಟ್ಟದ ಎಸ್ಸಿ-ಎಸ್ಟಿ ಜಾಗೃತಿ ಸಮಿತಿ ಸದಸ್ಯ ನಿಂಗರಾಜ ಮಲ್ಲಾಡಿ, ಗ್ರಾಮದಲ್ಲಿ ಪರಿಶಿಷ್ಟ ಜಾತಿಯವರೇ ಹೆಚ್ಚು ಜನ ವಾಸವಾಗಿದ್ದು, 2 ಎಕರೆ ಸ್ಮಶಾನ ಭೂಮಿ ಮಂಜೂರಾಗಿದೆ. ಈ ಸ್ಮಶಾನಕ್ಕೆ ಮೂಲಸೌಕರ್ಯಗಳಿಲ್ಲ. ಬೇರೆಡೆಯಿಂದ ಬರುವ ಕೊಳಚೆ ನೀರು ಸ್ಮಶಾನದ ಮಧ್ಯಭಾಗದಲ್ಲಿ ಹರಿಯುತ್ತದೆ.

ಳೆಗಾಲದಲ್ಲಿ ಹೆಚ್ಚು ನೀರು ಹರಿದು ಶವ ಸಂಸ್ಕಾರ ಮಾಡಲು ದಲಿತರಿಗೆ ತುಂಬಾ ತೊಂದರೆಯಾಗುತ್ತಿದೆ. ಶವ ಸಂಸ್ಕಾರ ಮಾಡಲು ಗುಂಡಿ ತೋಡಿದರೆ ಆ ಗುಂಡಿಯಲ್ಲಿ ನೀರು ತುಂಬಿ ಶವ ಸಂಸ್ಕಾರ ಮಾಡಲು ಆಗದಂತಾಗಿದ್ದು, ಸ್ಮಶಾನ ಇದ್ದೂ ಇಲ್ಲದಂತಾಗಿದೆ. ಕಟ್ಟೆಮಳಲವಾಡಿ ಗ್ರಾಮ ಪಂಚಾಯಿತಿ ಈ ಸ್ಮಶಾನದ ಅವ್ಯವಸ್ಥೆಯನ್ನು ಸರಿಪಡಿಸಬೇಕು. ದಲಿತರ ಸ್ಮಶಾನದಲ್ಲಿ ಶವ ಸಂಸ್ಕಾರ ಮಾಡಲು ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಸ್ಥಳದಲ್ಲಿದ್ದ ಜಿಲ್ಲಾ ಪಂಚಾಯಿತಿ ಇಂಜಿನಿಯರ್ ನರಸಿಂಹಯ್ಯ ಅವರಿಗೆ ಸ್ಮಶಾನದ ಅಭಿವೃದ್ಧಿಗೆ ಅಗತ್ಯ ಕ್ರಮದ ಕುರಿತು ಮತ್ತು ಅಂದಾಜು ವೆಚ್ಚದ ಕುರಿತು ನೀಲಿನಕ್ಷೆಯನ್ನು ಒಂದು ವಾರದೊಳಗೆ ನನಗೆ ತಲುಪಿಸಲು ಸೂಚಿಸಿ, ಆದ್ಯತೆ ಮೇರೆಗೆ ಸ್ಮಶಾನದೊಳಗೆ ಹರಿದುಹೋಗುರ‌್ತಿರುವ ಕೊಳಚೆ ನೀರನ್ನು ಕಾಲುವೆ ನಿರ್ಮಿಸಿ ಶೀಘ್ರ ಕ್ರಮವಹಿಸಬೇಕೆಂದು ಉಪವಿಭಾಗಾಧಿಕಾರಿ ಸೂಚಿಸಿದರು.

ಗಾವಡಗೆರೆ ಉಪತಹಸೀಲ್ದಾರ್ ಅರುಣ್, ಗ್ರಾಮಲೆಕ್ಕಾಧಿಕಾರಿ ಶ್ರೀವಾಸ್ತವ, ಬಿಲ್ ಕಲೆಕ್ಟರ್ ಮಾದೇಶ, ಗ್ರಾ.ಪಂ. ಸದಸ್ಯ ಆಂಜನೇಯ ಗ್ರಾಮಸ್ಥರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net