

ಉಡುಪಿ: ಅಂಗವೈಕಲ್ಯತೆಯನ್ನು ದುರ್ಬಲತೆ ಎಂದು ಭಾವಿಸದೇ ಸರ್ಕಾರದಿಂದ ದೊರಕುವ ಸೌಲಭ್ಯಗಳನ್ನು ಸದುಪಯೋಗಿಸಿಕೊಂಡು, ಪ್ರತಿಯೊಬ್ಬ ಫಲನುಭವಿಗಳು ಸ್ವಾವಲಂಬನೆ ಸಾಧಿಸಿ ಸಮಾಜಕ್ಕೆ ಮಾದರಿಯಾಗಬೇಕು ಎಂದು ಪೌರಾಯುಕ್ತ ರಾಯಪ್ಪ ಹೇಳಿದರು.
ಬುಧವಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ ಹಾಗೂ ಕೃತಕ ಅಂಗಾಂಗ ತಯಾರಿಕ ಕಾರ್ಪೊರೇಷನ್ ಆಫ್ ಇಂಡಿಯಾ (ಅಲಿಂಕೋ) ಸಂಯುಕ್ತ ಆಶ್ರಯದಲ್ಲಿ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಎ.ಡಿ.ಐ.ಪಿ ಮತ್ತು ಆರ್.ವಿ.ವೈ ಯೋಜನೆಯಡಿಯಲ್ಲಿ ದಿವ್ಯಾಂಗ ವ್ಯಕ್ತಿಗಳಿಗೆ ಮತ್ತು ಹಿರಿಯ ನಾಗರಿಕರಿಗೆ ಸಾಧನ ಸಲಕರಣೆಗಳ ವಿತರಣೆಗಾಗಿ ನಡೆದ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಭಾರತ ಸರ್ಕಾರ ದಿವ್ಯಾಂಗ ವ್ಯಕ್ತಿಗಳಿಗೆ ಹಾಗೂ ಹಿರಿಯ ನಾಗರಿಕರಿಕರಿಗೆ ಅವಶ್ಯವಿರುವ ಕೃತಕ ಸಲಕರಣೆಗಳನ್ನು ತಯಾರಿಸಿ ನೀಡುವ ಉದ್ದೇಶದಿಂದ ಜಿಲ್ಲೆಯ ವಿವಿಧೆಡೆ ತಪಾಸಣಾ ಶಿಬಿರ ಆಯೋಜಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ, ದಿವ್ಯಾಂಗರಿಗೆ ಅನುಕಂಪದ ಅವಶ್ಯಕತೆ ಇರುವುದಿಲ್ಲ, ಅದರ ಹೊರತು ಅವರಿಗೆ ಉತ್ತಮ ಜೀವನ ನಡೆಸಲು ಬೇಕಾಗಿರುವ ಸೌಲಭ್ಯವನ್ನು ಕಲ್ಪಿಸುವ ಜವಾಬ್ದಾರಿ ಸಮಾಜದ ಮೇಲಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸಾತ್ವಿಕ್, ಅಲಿಂಕೋದ ಜಿಗಿಶಾ, ಕೆ.ಎಂ.ಸಿ. ವೈದ್ಯಾಧಿಕಾರಿ ಡಾ. ಪಾರ್ಥ್ ಮತ್ತಿತರರು ಉಪಸ್ಥಿತರಿದ್ದರು. ರೆಡ್ಕ್ರಾಸ್ನ ಸದಸ್ಯ ಕಾರ್ಯದರ್ಶಿ ಡಾ.ಗಣನಾಥ ಶೆಟ್ಟಿ ಎಕ್ಕಾರು ಸ್ವಾಗತಿಸಿ, ನಿರೂಪಿಸಿದರು. ಎಮ್. ಮಧುಸೂದನ್ ವಂದಿಸಿದರು.